

ಹೊಸಪೇಟೆ: ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಇಲ್ಲಿನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.12ರಂದು ನಡೆದ ಮತದಾನದಿಂದ ದೂರ ಉಳಿದಿದ್ದ 20ನೇ ವಾರ್ಡ್ ಸದಸ್ಯ ಕೆ.ಮಹೇಶ್ ಕುಮಾರ್ ಅವರ ಸದಸತ್ವ ರದ್ದು ಪಡಿಸಿ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ಅವರು ಉಚ್ಛಾಟನೆ ಆದೇಶ ನೀಡಿದ್ದರು. ನಂತರ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ ಬಳಿಕವು ಅದನ್ನು ಉಲ್ಲಂಘನೆ ಮಾಡುವುದು ಹಾಗೂ ಮತದಾನದಿಂದ ದೂರ ಉಳಿಯುವುದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ವಿಪ್ ಉಲ್ಲಂಘನೆ ಮಾಡಿ ಮತದಾನದಿಂದ ದೂರ ಉಳಿಯುವುದು ಕೂಡ ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಅವರ ನಗರಸಭಾ ಸದಸ್ಯತ್ವ ರದ್ದುಪಡಿಸಲು ಕೋರಿ ಜಿಲ್ಲಾಧಿಕಾರಿ ಅವರಿಗೆ ದೂರು ಸಲ್ಲಿಸಲಾಗಿತ್ತು.
ಸಾಕ್ಷಿ ಆಧಾರಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಾಣಾಧಿಕಾರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉದ್ದೇಶ ಪೂರ್ವಕ ಚುನಾವಣೆ ಸಭೆಗೆ ಗೈರು ಹಾಜರಾಗಿರುವುದರಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ನಿಯಮ 3 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 20ನೇ ವಾರ್ಡಿಗೆ ಕೆ.ಮಹೇಶಕುಮಾರ ಆಯ್ಕೆಯಾದ ನಗರಸಭೆ ಸದಸ್ಯತ್ವವನ್ನು ರದ್ದುಪಡಿಸಿ ಆದೇಶಿಸಿದೆ. ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಗಿದೆ.