ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಧಿಕಾರಿ ಪಾತ್ರ ಮುಖ್ಯ

18 MANJU 01
Published on

ಹೊಸಪೇಟೆ: ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಕಾನೂನಾತ್ಮಕ ದಾಖಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡತಗಳ ಮೇಲೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬ ಟ್ಯಾಗ್‌ಲೈನ್ ಮುದ್ರಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ-2009, ಪೋಕ್ಸೋ-2012 ಹಾಗೂ ಬಾಲ ನ್ಯಾಯ ಕಾಯಿದೆ-2015 ರ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಪೋಕ್ಸೋ ಪ್ರಕರಣಗಳು, ಬಾಲ್ಯ ವಿವಾಹಗಳು ನಿಯಂತ್ರಿಸಲು ಸರ್ಕಾರದ ಸುತ್ತೋಲೆಗಿಂತ ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಪ್ರಸ್ತುತದಲ್ಲಿ ಮಕ್ಕಳಿಗೆ ಅನ್‌ಲೈನ್ ಚಟುವಟಿಕೆಗಳು ಮತ್ತು ಮಾದಕ ವಸ್ತುಗಳು ವಿಪರೀತ ಮಾರಕವಾಗಿವೆ. ಅಧಿಕಾರಿಗಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ಆಯೋಗದ ಸದಸ್ಯ ಶಶಿಧರ ಕೊಸಂಬೆ ಮಾತನಾಡಿ, ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಪೊಲೀಸ್ ಇಲಾಖೆಯ ನಿರಾಪೇಕ್ಷಣ ಪತ್ರ ಪಡೆಯಬೇಕು. ಶಾಲಾ, ಕಾಲೇಜು ಕಟ್ಟಡಗಳ ಮೇಲೆ ವಿದ್ಯುತ್ ತಂತಿ ಮಾರ್ಗಗಳಿದ್ದರೇ ಸ್ಥಳಾಂತರಿಸಬೇಕು. ಶೀಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಬೋಧನೆಯನ್ನು ತಪ್ಪಿಸಬೇಕು. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ಶೌಚಗೃಹಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದರು.

ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನಿರ್ಮಿತಗೊಂಡ ಕೃಷಿ ಹೊಂಡಗಳು, ಬೊರವೆಲ್‌ಗಳು ಸುತ್ತ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ವಿಫಲಗೊಂಡ ಬೊರವೆಲ್‌ಗಳನ್ನು ಮುಚ್ಚದೇ ಅವಘಡಗಳು ಸಂಭವಿಸಿದರೇ ಅಧಿಕಾರಿಗಳನ್ನು ನೇರಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸಲಾಗುವುದು. ಕೆಎಸ್‌ಆರ್‌ಟಿಸಿ ಎಲ್ಲಾ ಚಾಲಕರಿಗೆ, ನಿರ್ವಾಹಕರಿಗೆ ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಮಕ್ಕಳ ರಕ್ಷಣಾ ನೀತಿ ಕುರಿತು ತರಬೇತಿ ನೀಡಬೇಕು ಎಂದರು.

ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ, ಡಾ.ಕೆ.ಟಿ.ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಉಂಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net