

ಹೊಸಪೇಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾದ್ಯಂತ 47 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬೇಟಿ ಬಚವೋ, ಬೇಟಿ ಪಡವೋ ಯೋಜನೆಯ ದಶಮಾನೋತ್ಸವ ನಿಮಿತ್ತ ಮಿಷನ್ ಶಕ್ತಿ ಯೋಜನೆಯಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಪೋಕ್ಸೋ ಕಾಯ್ದೆ-2012 ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಗಳಲ್ಲಿ ತುಂಬಾ ಕಠಿಣ ಶಿಕ್ಷೆಗಳಿವೆ. ಬಾಲ್ಯ ವಿವಾಹ ಸಂಭವಿಸಿದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿ ಮದುವೆಯಾದ ಯುವಕನ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತದೆ. ಇದರೊಂದಿಗೆ ಕುಟುಂಬ ಸದಸ್ಯರ ವಿರುದ್ಧವು ಕ್ರಮಕೈಗೊಳ್ಳಲಾಗುತ್ತದೆ. ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದೆ. ಅಪ್ರಾಪ್ತ ಬಾಲಕಿಯರು ವೈವಾಹಿಕ ಜೀವನ ನಡೆಸಲು ದೈಹಿಕವಾಗಿ ಸಮರ್ಥರಾಗಿರುವುದಿಲ್ಲ. ಗರ್ಭಪಾತ, ಅವಧಿಗೆ ಮುನ್ನ ಮಗುವಿನ ಜನನ, ಶಿಶು ಮರಣ, ತಾಯಿ ಮರಣ ಸಹ ಸಂಭವಿಸುತ್ತವೆ. ಸಂಘ ಸಂಸ್ಥೆಗಳು, ಮಠ ಮಂದಿರಗಳು ಸಾಮೂಹಿಕ ವಿವಾಹ ನಡೆಸುವ ವೇಳೆ ಮದುವೆಯಾಗುವ ಗಂಡು ಹಾಗೂ ಹೆಣ್ಣಿನ ವಯಸ್ಸನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಬಾಲ್ಯ ವಿವಾಹ ನಡೆದಿರುವುದು ಕಂಡುಬAದರೆ ಆಯೋಜಕರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮರಿಯಮ್ಮನಹಳ್ಳಿ ಶ್ರೀಗುರುಪಾದದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಖಾಜಿ ಸೈಯದ್ ಅಜೀಜುಲ್ಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ವೇತ, ನಿರೂಪಣಾಧಿಕಾರಿ ಸುಭದ್ರದೇವಿ, ಸಂಪನ್ಮೂಲ ವ್ಯಕ್ತಿ ಎಚ್.ಸಿ.ರಾಘವೇಂದ್ರ ಇದ್ದರು.