ಸಿರಿಧಾನ್ಯಗಳು ಪೋಷಕಾಂಶಗಳ ಕಣಜ

22 MANJU 01
Published on

ಹೊಸಪೇಟೆ: ಸಿರಿಧಾನ್ಯಗಳಲ್ಲಿ ನಾರು ಮತ್ತು ಕಬ್ಬಿಣದ ಅಂಶಗಳು ಹೆಚ್ಚಾಗಿರುವುದರಿಂದ ಪೋಷಕಾಂಶಗಳ ಕಣಜವಿದ್ದಂತೆ ಹಾಗಾಗಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಕೃಷಿ ಇಲಾಖೆಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ನ್ಯೂಟ್ರಿ (ಪೌಷ್ಟಿಕಾಂಶ) ಸಿರಿಧಾನ್ಯಗಳ ಕಾರ್ಯಕ್ರಮದಡಿಯಲ್ಲಿ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಸಿರಿಧಾನ್ಯಗಳ ನಡಿಗೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಎಂಬ ಧ್ಯೆಯವಾಕ್ಯದಲ್ಲಿ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದ ನಿಮಿತ್ತ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. ಜೊತೆಗೆ ಇವುಗಳಲ್ಲಿ ಶಕ್ತಿಶಾಲಿ ಆಂಟಿಆಕ್ಸಿಡೆAಟ್‌ಗಳು ಮತ್ತು ರೋಗನಿರೋಧಕ ಶಕ್ತಿ ಇರುವುದರಿಂದ ಪೌಷ್ಠಿಕತೆಯ ಕಣಜಗಳೇ ಆಗಿವೆ. ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್, ನಾರಿನಾಂಶ ಹಾಗೂ ಖನಿಜಗಳು ಸಿರಿಧಾನ್ಯಗಳಲ್ಲಿವೆ. ಸಾಮೆ ಮತ್ತು ನವಣೆಗಳು ಪೋಷಕಾಂಶಗಳ ಸಿರಿಗಳಾಗಿವೆ. ಅಕ್ಕಿ, ರಾಗಿ ಮತ್ತು ಗೋಧಿ ಬಳಕೆಗಿಂತ ವಿವಿಧ ಪೋಷಕಾಂಶಗಳ ಗಣಿಯಂತಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಹಿತವಾಗಿರಲಿದೆ ಎಂದರು.

ಎಪಿಎಂಸಿ ವೃತ್ತದಿಂದ, ಮದಕರಿವೃತ್ತ, ದರ್ಗಾ ಮಸೀದಿ, ಬಸ್‌ನಿಲ್ದಾಣ, ಶಾನುಭೋಗ ವೃತ್ತ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ವಾದ್ಯವೃಂದಗಳೊಂದಿಗೆ ರಸ್ತೆ ಜಾಗೃತಿ ಜಾಥಾ ನಡೆಯಿತು.

ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚಿದಾನಂದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಾಷೂ ಮೈನುದ್ದಿನ್, ಹುಡಾ ಆಯುಕ್ತ ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net