

ಹೊಸಪೇಟೆ: ಕೇಂದ್ರ ಬಿಜೆಪಿ ಸರ್ಕಾರದ ಪೆಟ್ರೋಲ್, ಡಿಸೇಲ್ ಮತ್ತು ಎಸ್‌ಪಿಜಿ ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಡಾ.ಪುನೀತ್ ರಾಜಕುಮಾರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭರತ್ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪಾದವಾಗಿದೆ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆರ್ಥಿಕ ನೀತಿಯಿಂದ ಆರ್ಥಿಕ ವ್ಯವಸ್ಥೆ ನಿಯಂತ್ರಣ ತಪ್ಪಿದೆ. ಇದರಿಂದ ಜನಸಾಮಾನ್ಯ ಬದುಕು ತತ್ತರ ಆಗಿದೆ. ನರೇಂದ್ರ ಮೋದಿ ಸರ್ಕಾರ ಬಂದ ನಂತರ ಜನರ ಹಣವನ್ನು ಬೇರೆ ಬೇರೆ ರೂಪದಲ್ಲಿ ಲೂಟಿ ಮಾಡುತ್ತಿದೆ. ಬಿಜೆಪಿ ಅಚ್ಚೆದ್ದಿನ್ ಹೇಳಿರುವುದು ಮಾತ್ರ ನಿಜವಾದ ಅಚ್ಚೆದಿನ್ ಕೊಟ್ಟದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಸರ್ಕಾರದ ಆರ್ಥಿಕ ನೀತಿಯಿಂದ ಸಣ್ಣಸಣ್ಣ ಕೈಗಾರಿಕೆಗಳು ನಾಶವಾಗಿ ಸುಮಾರು 11ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಮೂಲಕ ಜನರ ಆದಾಯವನ್ನು ಕಸಿದು ಕೊಂಡಿದೆ ಎಂದು ದೂರಿದರು.
ಇದೀಗ ಕೇಂದ್ರ ಸರ್ಕಾರ ಮತ್ತೆ ಡಿಸೇಲ್ ಮೇಲೆ ಲೀಟರೆ 2 ರೂ. ಅಬಕಾರಿ ಶುಲ್ಕ ಹೆಚ್ಚಿಸಿದೆ. ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಸಿ.ಎನ್.ಜಿ. ದರವನ್ನೂ ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಿಸಿದೆ. ಡೀಸೆಲ್, ಅಡುಗೆ ಅನಿಲ, ಸಿ.ಎನ್.ಜಿ. ದರ ಹೆಚ್ಚಳ ಮಾಡಿರುವುದು ಇತರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯುವAತೆ ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿನಿಭಟನನಿರತ ತಳ್ಳು ಗಾಡಿಯ ಮೇಲೆ ಗ್ಯಾಸ್ ಸಿಲಿಂಡರ್‌ನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲ, ಪ್ರಮುಖರಾದ ಭರತ್ ಕುಮಾರ, ಶಣ್ಮುಖ ನಾಯಕ, ಜಿಶಾನ್ ಹ್ಯಾರಿಸ್, ಆರೂನ್ ಶೇಕ್, ಪ್ರದೀಪ್ ನಾಯ್ಕ, ಬಿ.ಗಣೇಶ್ ಇತರರಿದ್ದರು.