ಚಿನ್ನಾಭರಣ ಲಪಟಾಯಿಸಿದ್ದ ಬಸ್ ಚಾಲಕ, ಕಂಡಕ್ಟರ್ ಬಂಧನ

Published on

ಹೊಸಪೇಟೆ: ಹರಪನಹಳ್ಳಿ ಠಾಣೆ ವ್ಯಾಪಿಯಲ್ಲಿ ಪೊಲೀಸರ ಸೋಗಿನ ಕಥೆಕಟ್ಟಿ ಚಿನ್ನಾಭರಣ ಲಪಟಾಯಿಸಿದ್ದ ಖಾಸಗಿ ಬಸ್‌ನ ಚಾಲಕ, ಕಂಡಕ್ಟರ್ ಸೇರಿ ಮೂವರನ್ನು ಪೊಲೀಸರು 28 ಗಂಟೆಯಲ್ಲೇ ಬಂಧಿಸಿ, 61.25 ಲಕ್ಷ ರು. ಮೌಲ್ಯದ 806 ಗ್ರಾಂ ಚಿನ್ನಾಭರಣ ಜಫ್ತಿ ಮಾಡಿದ್ದಾರೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಭದ್ರಾವತಿಯ ಹೊಳೆಹೊನ್ನೂರಿನ ನಿವಾಸಿ, ಬಸ್ ಚಾಲಕ ಮಂಜುನಾಥ (39), ಹಾವೇರಿ ಜಿಲ್ಲೆ ಗುತ್ತಲ ತಾಂಡಾದ ನಿವಾಸಿ, ಕಂಡಕ್ಟರ್ ಕೃಷ್ಣ ಲಕ್ಕಪ್ಪ ಲಮಾಣಿ (26) ಮತ್ತು ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದ ನಿತ್ಯಾನಂದ (33) ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿAದ 61,25,600 ರು. ಮೌಲ್ಯದ 806 ಗ್ರಾಂ. ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ ಮತ್ತು ಕಾರು ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮಾ.16 ರಂದು ಶಿವಮೊಗ್ಗದಿಂದ, ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ನಾಲ್ವರು ಅಕ್ಕಸಾಲಿಗರು ಪ್ರತ್ಯೇಕವಾಗಿ ಒಟ್ಟು 806 ಗ್ರಾಂ ಬಂಗಾರದ ಆಭರಣಗಳನ್ನು ಬಸ್‌ನ ಕಂಡಕ್ಟರ್ ಕೃಷ್ಣಗೆ ನೀಡಿದ್ದರು. ತಡರಾತ್ರಿ ಬಸ್‌ನ ಕಂಡಕ್ಟರ್ ಕೃಷ್ಣ ಬಂಗಾರದ ಆಭರಣಗಳ ಪಾರ್ಸೆಲ್ ಇಟ್ಟಿದ್ದ ಒಬ್ಬರಿಗೆ ಫೋನ್ ಮಾಡಿ, ಹರಪನಹಳ್ಳಿ ತಾಲೂಕು ತೆಲಿಗಿಯ ಹತ್ತಿರ ಇಬ್ಬರು ವ್ಯಕ್ತಿಗಳು ಬಸ್ ನಿಲ್ಲಿಸಿ, ಬಸ್‌ನಲ್ಲಿ ಅಕ್ರಮವಾಗಿ ಬಂಗಾರ ಸಾಗಿಸಲಾಗುತ್ತಿದೆ ಎಂದು ನಾವು ಪೊಲೀಸ್ ಎಂದು ಹೇಳಿ ಎಂದು ಹೆದರಿಸಿ ಬಂಗಾರವನ್ನು ತೆಗೆದುಕೊಂಡು, ಹೇಳೀ ಕರೆದು ಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾನೆ. ಬಳಿಕ ಆತನ ಮೊಬೈಲ್ ಆಫ್ ಮಾಡಿದ್ದಾನೆ. ಅನುಮಾನಗೊಂಡ ಅಕ್ಕಸಾಲಿಗ ಕುಮಾರ ಎಂಬವರು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾ.17ರಂದು ದೂರು ನೀಡಿದ್ದರು.

ದೂರಿನಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ಕಟ್ಟುಕಥೆ ಕಟ್ಟಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಕೂಡಲೇ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ, ವಿಜಯಪುರ, ಶಿವಮೊಗ್ಗ, ದಾವಣಗೆರೆ ಕಡೆಗಳಲ್ಲಿ ತನಿಖೆ ನಡೆಸಿದ್ದಾರೆ. ಘಟನೆ ನಡೆದ 28 ಗಂಟೆಗಳಲ್ಲಿ ಆರೋಪಿತರನ್ನು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net