ಹೊಸಪೇಟೆ: ಮದ್ಯಪಾನ ಮಾಡಿ ನಿರ್ಲಕ್ಷತನದಿಂದ ಬಸ್ ಚಲಾಯಿಸಿದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಇಲ್ಲಿನ ಅಧಿಕ ಸಿಜೆ(ಕಿ.ವಿ) ಮತ್ತು ಜೆಎಂಎಫ್‌ಸಿ ನಾಯಾಲಯ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ 2500 ರೂ. ದಂಡ ವಿಧಿಸಿ ಆದೇಶಿಸಿದೆ.
ಕೊಪ್ಪಳ ತಾಲೂಕಿನ ಗಂಗಾವತಿ ಕೆಎಸ್‌ಆರ್‌ಟಿಸಿ ಡಿಪೋಗೆ ಸೇರಿದ ಬಸ್ ಚಾಲಕ ಶಿವಪ್ಪ ಎಂಬುವರಿಗೆ ಶಿಕ್ಷೆಯಾಗಿದೆ. ನಗರದ ಹರಿಹರ ರಸ್ತೆಯಲ್ಲಿ 2019ರ ಮೇ.13 ರಂದು ನಗರದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಮಧ್ಯಪಾನ ಮಾಡಿ ನಿರ್ಲಕ್ಷತನದಿಂದ ಅಪಘಾತ ಮಾಡುವ ರೀತಿಯಲ್ಲಿ ಅಡ್ಡದಿಡ್ಡಿ ಬಸ್ ಚಲಾಯಿಸುತ್ತಿದ್ದ ಎಂದು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಂದಿನ ಎ.ಎಸ್.ಐ ಹಾಲಪ್ಪ ಅವರು ಪ್ರಕರಣ ದಾಖಲಿಸಿದರು. ಪ್ರಕರಣ ತನಿಖೆಯನ್ನು ಅಂದಿನ ತನಿಖಾಧಿಕಾರಿ ನಿಂಗಪ್ಪ ಅವರು ದಾಖಲೆಗಳೊಂದಿಗೆ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ನಗರದ ಅಧಿಕ ಸಿ.ಜೆ.(ಕಿ.ವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಅಶೋಕ ಆರ್.ಎಚ್ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿತನು ಅಪರಾಧ ಎಸಗಿರುವುದು ರುಜುವತ್ತಾಗಿದೆ ಎಂದು ಕಲಂ: 279 ಐಪಿಸಿ ಅಡಿಯಲ್ಲಿ ನಿರ್ಲಕ್ಷತೆಯಿಂದ ವಾಹನ ಚಾಲಯಿಸಿದ್ದಕ್ಕೆ ಒಂದು ತಿಂಗಳು ಸಾದಾ ಜೈಲು ವಾಸ ಮತ್ತು ರೂ.500 ಜುಲ್ಮಾನೆ ವಿಧಿಸಿದ್ದಾರೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ್ದಕ್ಕೆ ಕಲಂ: 185 ಐಎಂವಿ ಕಾಯ್ದೆ ಅಡಿಯಲ್ಲಿ ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು ಎರಡು ಸಾವಿರ ಜುಲ್ಮಾನೆ ಕಟ್ಟುವಂತೆ ತೀರ್ಪನ್ನು ನೀಡಿದ್ದಾರೆ. ಪ್ರಕರಣವನ್ನು ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಟಿ.ರೇವಣಸಿದ್ದಪ್ಪ ವಾದ ಮಂಡಿಸಿದರು.