

ಹೊಸಪೇಟೆ: ತಾಯಿ ಮಗುವಿನ ಸಂಬAಧ ಗರ್ಭದಿಂದಲೇ ಆರಂಭವಾಗುತ್ತದೆ. ಎದೆಹಾಲುಣಿಸಿದ ತಾಯಿ ದೇವರಿಗೆ ಸಮಾನ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ ನಾಯ್ಕ ಹೇಳಿಕೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಗೆ ನಮ್ಮ ದೇಶದಲ್ಲಿ ದೈವಿಕ ಸ್ಥಾನಮಾನವಿದೆ. ಮಕ್ಕಳ ಆರೋಗ್ಯಕ್ಕೆ ತಾಯಿಯ ಎದೆಹಾಲು ಬಹಳ ಮುಖ್ಯವಾಗಿದೆ. ಬದಲಾಗಿ ಯಾವುದೇ ಆಹಾರಗಳು ಯೋಗ್ಯವಲ್ಲ. ಶಿಶುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದದು. ಜಿಲ್ಲೆಯ ಎಲ್ಲಾ 5 ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೈಕೆ ಮಕ್ಕಳ ಘಟಕ, ಪೌಷ್ಠಿಕ ಪುರ್ನಚೇತನ ಕೇಂದ್ರ ಮತ್ತು ಸಮುದಾಯ ಮಟ್ಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಆರ್‌ಸಿಹೆಚ್.ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಗು ಜನಿಸಿದ ಆರು ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. ಪ್ರತಿ ವರ್ಷದಂತೆ ಈ ವರ್ಷವು ಸಹ ಆ.1 ರಿಂದ 7 ರ ವರಗೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಭಾಸ್ಕರ್, ಆಡಳಿತ ವೈದ್ಯಾಧಿಕಾರಿ ಡಾ.ಪ್ರಸಾದ್, ವೈದ್ಯಾರಾದ ಡಾ.ಉಷಾ, ಡಾ.ನೂರ್‌ಬಾಷಾ ಇತರರಿದ್ದರು.