

ಹೊಸಪೇಟೆ: ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಸಂದರ್ಭ ನನಗೂ ಕರೆ ಬಂದಿತ್ತು ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರೆ ಬಂದಿದೆಯೆಂದು ಆಗ ಹೋಗಿದ್ದರೆ ಈಗ ಸಚಿವನಾಗಿರುತ್ತಿದ್ದೆ. ಆದರೆ, ಸಿದ್ದರಾಮಯ್ಯ ಮುಖ ನೋಡಿಕೊಂಡು ನಾನು ಕಾಂಗ್ರೆಸ್‌ನಲ್ಲಿ ಮುಂದುವರಿದಿದ್ದೇನೆ. ಬಿಜೆಪಿಗೆ ಆಹ್ವಾನ ಕುರಿತಂತೆ ಮನೆಯಲ್ಲೇ ಎಲ್ಲ ಚರ್ಚೆ ಮಾಡಲಾಯಿತು. ಬಳಿಕ ಪಕ್ಷಕ್ಕೆ ಸೇರಲು ನಿರ್ಧಾರ ಮಾಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರಕ್ಕೆ ಅನುದಾನ ನೀಡಿದ್ದರು. ಈ ಕಾರಣಕ್ಕೆ ಕಾಂಗ್ರೆಸ್‌ನಿಂದ ಗೆಲ್ಲಲು ಸಾಧ್ಯವಾಯಿತು. ಅವರಿಗೆ ಮೋಸ ಮಾಡಲು ಮನಸಾಗಲಿಲ್ಲ ಎಂದರು.