ಪ್ರಾಣ‌ಕೊಟ್ಟೆವು ಭೂಮಿ ಬಿಡೆವು

IMG-20241104-WA0011
Published on
ಹೊಸಪೇಟೆ: ವಕ್ಫ್‌ ಹೆಸರಿನಲ್ಲಿ ಜಮೀನು ಕಬಳಿಸುವ ಹುನ್ನಾರವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ತಹಸೀಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪಟೇಲ್ ನಗರದ ಬಿಜೆಪಿ ಕಚೇರಿಯಿಂದ ವೆಂಕಟೇಶ್ವರ ಕಲ್ಯಾಣ ಮಂಟಪ ಮಾರ್ಗವಾಗಿ ತಹಸೀಲ್ ಕಚೇರಿ ವರೆಗೆ ಕಾರ್ಯಕರ್ತರು ಪ್ರತಿಭಟನ ರ್ಯಾಲಿ ನಡೆಸಿದರು. ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರೆಟ ಸಿದ್ದರಾಮಯ್ಯಗೆ ಧಿಕಾರ, ರೈತರ ಬದುಕಿಗೆ‌ಕೊಳ್ಳೆ ಇಟ್ಟ ಜಮೀರ್ ರಾಜೀನಾಮೆ ನೀಡಲಿ, ವಕ್ಫ್ ಡೂಂಗಾಗಿರಿಗೆ ಧಿಕಾರ, ಪ್ರಾಣ‌ಕೊಟ್ಟೆವು ಭೂಮಿ ಬಿಡೆವು ಎಂದು ಘೋಷಣೆ ಕೂಗಿ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ರೈತರ ಫಲವತ್ತಾದ ಭೂಮಿ, ಮಠ ಮಂದಿರ, ಚರ್ಚ, ಮಸೀದಿ ಎಲ್ಲಾ ಸಮಾಜದ ಪ್ರಾರ್ಥನಾ ಸ್ಥಳ, ಬಡ ಜನರ ಆಸ್ತಿ ಹಾಗೂ ಸರ್ಕಾರಿ ಬೆಲೆ ಬಾಳುವ ಗೋಮಾಳ ಮತ್ತು ವಾಣಿಜ್ಯ ಉದ್ಯಮಕ್ಕೆ ಮೀಸಲಿಟ್ಟ ಭೂಮಿಯನ್ನು ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರನ್ನು ಸೇರಿಸಿ ರಾಜ್ಯದಲ್ಲಿ ತೊಗಲಕ್‌ ದರ್ಬಾರ್‌ ಆಡಳಿತವನ್ನು ಕಾಂಗ್ರೆಸ್‌ ನಡೆಸುತ್ತಿದೆ ಎಂದು ಆಗ್ರಹಿಸಿದರು.
ಇಷ್ಟು ದಿನ ಲವ್‌ ಜೆಹಾದ್‌ ಬಗ್ಗೆ ಕೇಳಿದ್ದೆವು. ಈಗ ಲ್ಯಾಂಡ್‌ ಜೆಹಾದ್‌ ಆರಂಭವಾಗಿದೆ. ಇದಕ್ಕೆ ಸ್ವತಃ ಸಿಎಂ ಅವರೇ ಕುಮ್ಮಕ್ಕು ಕೊಟ್ಟಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಕ್ಫ್ ಅದಾಲತ್‌ ಆರಂಭಿಸಿದ ಬಳಿಕವೇ ಇದೆಲ್ಲ ಆರಂಭವಾಗಿದೆ. ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಹೊರಟಿರುವ ಈ ಹೊತ್ತಿನಲ್ಲಿ ಇದನ್ನೆಲ್ಲ ಏಕೆ ಮಾಡಬೇಕಿತ್ತು? ಇದರ ಉದ್ದೇಶ ವೇನು? ವಕ್ಫ್ ಆಸ್ತಿ ಹೆಚ್ಚಿಸಿಕೊಳ್ಳುವ ಮೂಲಕ ಲ್ಯಾಂಡ್‌ ಜೆಹಾದ್‌ ಇವರ ಉದ್ದೇಶವಾಗಿದೆ. ವಕ್ಫ್ ಮಂಡಳಿಯ ಇದೊಂದು ವ್ಯವಸ್ಥಿತ ಹುನ್ನಾರವಾಗಿದ್ದು, ವಕ್ಫ್‌ ಮಂಡಳಿಯ ಆಸ್ತಿಯ ನೆಪದಲ್ಲಿ ಸಾಕಷ್ಟು ರೈತರ ಜಮೀನು ಕಬಳಿಸಲಾಗಿದೆ. ಎಲ್ಲೆಂದರಲ್ಲಿ ಭೂಮಿ ಕಸಿಯುವ ಪ್ರಯತ್ನಗಳನ್ನು ಮಾಡಿದ್ದು, ರೈತರು ಕೂಡಲೇ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ, ತಮ್ಮ ಭೂಮಿ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಣಿದು ಕಾನೂನು ಬಾಹಿರ ಕ್ರಮಕೈಗೊಳ್ಳಬಾರದು. ಮತ್ತದೇ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರ್ಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net