

ಹೊಸಪೇಟೆ: ವಿಕಸಿತ ಭಾರತ ನಮ್ಮ ಗುರಿಯಾಗಿದ್ದು, ದೇಶದ 140 ಕೋಟಿ ಜನರಿಂದ ನವ ಭಾರತ ನಿರ್ಮಾಣವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಹೇಳಿದರು.
ಬಿಜೆಪಿ ಪಕ್ಷದಿಂದ ತಾಲೂಕಿನ ಬೈಲುವದ್ದಿಗೇರಿ ಸುಡಗಾಡಪ್ಪ ತಾತನವರ ದೇಗುಲದಲ್ಲಿ ಭಾನುವಾರ ವಿಕಸಿತ ಭಾರತದ ಅಮೃತ ಕಾಲ” ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ರರದ 11 ವರ್ಷ ಕಾರ್ಯಾಗಾರದಲ್ಲಿ ಮಾತನಾಡಿದರು.
2014ರ ಮುಂಚೆ ಭಯೋತ್ಪಾದಕರು ಬಂದು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಂತಹ ಪರಿಸ್ಥಿತಿಯಿಂದ ಪ್ರಸ್ತುತ ಪ್ರಧಾನಿ ಮೋದಿ ಅವರ ದಕ್ಷ ಆಡಳಿತದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್ ಸ್ಟ್ರೈಕ್ ಮಾಡುವಷ್ಟು ಬೆಳೆದಿದೆ. ಬಾಹ್ಯಾಕಾಶ ಹಾಗೂ ಸೇನೆಯಲ್ಲಿ ಅಗಾಧ ಬದಲಾವಣೆ ತರಲಾಗಿದೆ. ದೇಶದ ಶಕ್ತಿ ಏನೆಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಇದಕ್ಕಾಗಿಯೇ ದೇಶದ 140 ಕೋಟಿ ಜನತೆ ಹೆಮ್ಮೆಯಿಂದ ಹಾಗೂ ನಿರ್ಭೀತಿಯಿಂದ ಇದ್ದಾರೆ. ಬಡವರು, ಮಧ್ಯಮ ವರ್ಗ, ವಂಚಿತರು ಎಲ್ಲರಿಗೂ ತಳಮಟ್ಟದ ಸುಧಾರಣೆ ತಂದಿದ್ದೇವೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಸಾರಿಗೆ, ಕೃಷಿ ಹೀಗೆ ಪ್ರತಿ ವಲಯದಲ್ಲೂ ಹೊಸ ಆಧುನಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನದ ಸಮಗ್ರತೆಯ ಅತ್ಯುತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಹಿಂದೆ ಜನರು ಮೂಲ ಸೌಲಭ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚಬೇಕಿತ್ತು. ಈಗ ಅವು ಅವರ ಮನೆಬಾಗಿಲಿಗೆ ಬರುತ್ತಿವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪಾಪಿ ನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅಂಕಲಮ್ಮ, ಬೈಲುವದ್ದಿಗೇರಿ ಗ್ರಾ.ಪಂ. ಅಧ್ಯಕ್ಷೆ ಎ.ಲಕ್ಷ್ಮಿ ದೇವಿ, ಪ್ರಮುಖರಾದ ಪಾರ್ವತಿ, ಅನ್ನದಾನಿ ರೆಡ್ಡಿ, ಯರ್ರಿಸ್ವಾಮಿ, ಹೊನ್ನೂರಪ್ಪ, ಗೌಳಿ ರುದ್ರಪ್ಪ, ಭರತ್, ಉಮಾದೇವಿ, ಲಲಿತ, ಪೂರ್ಣಿಮಾ ಜಯಶ್ರೀ, ಅನುರಾಧ ಇತರರಿದ್ದರು.