

ಹೊಸಪೇಟೆ: ವಿಜಯನಗರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಎಸ್.ಸಂಜೀವರೆಡ್ಡಿ ಎಂದು ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ಅಮರನಾಥ ಪಾಟೀಲ್ ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಪ್ರಕಟಿಸಿದರು.
ನಂತರ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನೂ ಸಹ ಶಾಸಕ, ಸಂಸದ, ಪಕ್ಷದ ಅಧ್ಯಕ್ಷರಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಇದು ಬಿಜೆಪಿ ಪಕ್ಷದ ವೈಶಿಷ್ಟ್ಯತೆ. ಬಿಜೆಪಿಯಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಸಾಮಾನ್ಯ ಕಾರ್ಯಕರ್ತ ಸಹ ಉನ್ನತ ರಾಜಕಾರಣಿಯಾಗುವ ಅವಕಾಶವಿರೋದು ಬಿಜೆಪಿಯಲ್ಲಿ ಮಾತ್ರ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವದಲ್ಲಿ ನಂಬಿಕೆಯಲ್ಲಿ ನಮ್ಮ ಕಾರ್ಯಕರ್ತರು ಇದ್ದಾರೆ. ಆದ್ದರಿಂದ ಒಬ್ಬ ಸಾಮಾನ್ಯ ಕಾರ್ಯಕರ್ತ ಎಸ್.ಸಂಜೀವರೆಡ್ಡಿ ಅವರಿಗೆ ಮೂರು ವರ್ಷದ ಅವದಿಗೆ ಪಕ್ಷ ಅವಕಾಶ ನೀಡಿದೆ. ಅವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಿ, ಪಕ್ಷ ಸಂಘಟನೆಯಲ್ಲಿ ಶ್ರಮ ವಹಿಸಬೇಕು ಎಂದರು.
ನಿಕಟ ಪೂರ್ವ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವ್ಯವಸ್ಥೆ ಇರುವುದು ಬಿಜೆಪಿಯಲ್ಲಿ ಮಾತ್ರ. ಪಕ್ಷದ ನಾನಾ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಯಕರ್ತರ ಕಾರ್ಯ ವೈಖರಿಯನ್ನು ಗಮನಿಸಲಾಗುತ್ತಿರುತ್ತದೆ. ಅವಕಾಶ ಸಿಕ್ಕಾಗ ಆದ್ಯತೆ ಮೇರೆಗೆ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಎಲ್ಲರಿಗೂ ಒಂದೇ ಸಲ ಅವಕಾಶ ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆಗೆ ಬಲ ತುಂಬ ಬೇಕಿದೆ ಎಂದರು.
ಪಕ್ಷ ಕೊಟ್ಟಿರುವ ಜವಾಬ್ದಾರಿ ನಿಷ್ಠೆಯಿಂದ ನಿಭಾಯಿಸುವೆ. ಎಲ್ಲ ಮೋರ್ಚಾ, ಸಮುದಾಯಗಳ ಮುಖಂಡೊಂದಿಗೆ ಪಕ್ಷ ಕಟ್ಟುವ ಸಂಕಲ್ಪ ಮಾಡಿರುವೆ. ಮುಂದಿನ ಚುನಾವಣೆಯಲ್ಲಿ ಅಭ್ಯಾರ್ಥಿಗಳ ಗೆಲವಿಗೆ ಶ್ರಮ ಹಾಕಲಾಗುತ್ತದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಪರಿಹಾರ ಹಾಗೂ ಹೋರಾಟಕ್ಕೆ ಸಿದ್ದರಾಗುತ್ತೇವೆ. - ಎಸ್.ಸಂಜೀವರೆಡ್ಡಿ, ನೂತನ ಜಿಲ್ಲಾಧ್ಯಕ್ಷ, ವಿಜಯನಗರ