

ಹೊಸಪೇಟೆ: ಅವಕಾಶವಂಚಿತ ಸಮುದಾಯಗಳ ಸೇವೆ ಮಾಡುತ್ತಿರುವ ನಗರದ ಸಖಿಟ್ರಸ್ಟ್ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಭಾಗ್ಯಲಕ್ಷ್ಮಿ ಅವರಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅವಕಾಶವಂಚಿತ ಸಮುದಾಯದ ಯುವಜನರು, ನರೇಗಾ ಮಹಿಳೆಯರು, ದೇವದಾಸಿ ತಾಯಂದಿರು, ಮಕ್ಕಳು, ಸಣ್ಣರೈತರು ಮತ್ತು ಗಣಿಬಾಧಿತ ಜನರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಇವರು ಮೂಲತಃ ಕೋಲಾರ ಜಿಲ್ಲೆಯವರು ಕನ್ನಡ ವಿವಿಯಲ್ಲಿ ಪಿಎಚ್‌ಡಿ ಪದವಿ ಪಡೆದರು. ಕಲ್ಯಾಣ ಕಾರ್ನಟಕ ಜಿಲ್ಲೆಗಳಲ್ಲಿ ಅವಕಾಶದಂಚಿತ ಸಮುದಾಯಗಳ ಬದುಕಿನಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಸಖಿ ಸಂಸ್ಥೆಯನ್ನು ಆರಂಭಿಸಿದರು. ಅವಕಾಶ ವಂಚಿತ ಸಮುದಾಯಗಳ ಬದುಕಿಗೆ ಸ್ವಾಭಿಮಾನ, ಸ್ವಾವಲಂಬನೆ, ಘನತೆ ಮತ್ತು ಸುಸ್ಥಿರತೆಯನ್ನು ಕಟ್ಟಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.
ಭಾಗ್ಯಲಕ್ಷ್ಮಿಯವರು ಬೌದ್ಧಿಕ, ಮಾನಸಿಕ ಮತ್ತು ಶೈಕ್ಷಣಿಕ ತರಬೇತಿಯೊಡನೆ ಸಖಿಟ್ರಸ್ಟ್ನ ನಿರ್ದೇಶಕಿಯಾಗಿ, ಒಂದು ಉತ್ತಮವಾದ ಅವಕಾಶ ವಂಚಿತ ಸಮುದಾಯಗಳಿಂದಲೇ ಮಾನವ ಸಂಪನ್ಮೂಲವನ್ನು ಉತ್ತೇಜಿಸಿ ನಾಯಕತ್ವವನ್ನು ರೂಪಿಸಿ ಉತ್ತಮವಾದ ತಂಡವೊAದನ್ನು ಕಟ್ಟಿಕೊಂಡಿದ್ದಾರೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಗಣಿಗಾರಿಕೆಯ ವಿವಿಧ ಆಯಾಮಾಗಳ ಬಗೆಗೆ ಸಂಶೋಧನೆ, ಸತ್ಯಶೋಧನೆ, ಸಾಕ್ಷ್ಯಚಿತ್ರ, ಜನಪರ ವಕಾಲತ್ತುಗಳಲ್ಲದೆ, ಗಣಿಕಾರ್ಮಿಕರ ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಗಾಗಿ ಭಾದಿತ ಜನಸಮುದಾಯುಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮದ್ಯ ನಿಂತು ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.
ಡಾ.ಎಂ.ಭಾಗ್ಯಲಕ್ಷ್ಮಿಯವರು ಕಳೆದ 25 ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿ ಅವಕಾಶವಂಚಿತ ಸಮುದಾಯಗಳ ಅಭಿವೃದ್ಧಿಗಾಗಿ ಸಲ್ಲಿಸಿದ ಸಾಮಾಜಿಕ ಸೇವೆಗಾಗಿ ಹಲವು ಪ್ರಶಸ್ತಿಗಳು ಬಂದಿವೆ. ಇವರ ಸೇವೆಗೆ ರಾಜ್ಯ ಸರ್ಕಾರ ಗುರುತಿಸಿದೆ.