ಬಸವಜ್ಯೋತಿ ರಥಯಾತ್ರೆ ಸೆ.07ರಂದು

Published on

ಹೊಸಪೇಟೆ: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆದರೆ, ಈವರೆಗೆ ಜನಮಾನಸದಲ್ಲಿ ಸಾಂಸ್ಕೃತಿಕ ನಾಯಕ ಪರಿಕಲ್ಪನೆ ಬೆಳೆಸುವ ಕೆಲಸ ಮಾಡುವಲ್ಲಿ ಹಿಂದುಳಿದಿದ್ದೇವೆ ಎಂದು ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಸಂಚಾಲಕ ಡಾ.ಟಿ.ಎಚ್.ಬಸವರಾಜ ತಿಳಿಸಿದರು.

ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನಿಷ್ಟ ಪಕ್ಷ ಕಲ್ಯಾಣ ಕರ್ನಾಟಕ ಭಾಗದಕ್ಕಾದರೂ ಬಸವಣ್ಣನವರ ಬಸವತತ್ವ ವಿಚಾರಧಾರೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಂಭೀರ ಕಾರ್ಯಕ್ರಮ ಆಯೋಜಿಸಬೇಕಿತ್ತು. ಪ್ರಚಾರದ ಕೊರತೆಯಿಂದ ಯಾವಯದೂ ಆಗಲಿಲ್ಲ. ಆದರೆ, ಕಳೆದ 6 ತಿಂಗಳ ಹಿಂದೆ ಐನೂರು ಜನ ಲಿಂಗಾಯಿತ ಮಠಾಧೀಶರ ಒಕ್ಕೂಟ ರಚಿಸಿ ಅಭಿಯಾನ ಕೈಗೊಳ್ಳಲು ಮುಂದಾಗಿದೆ. ಬಸವನಬಾಗೇವಾಡಿಯಿಂದ ಸೆ.01ರಂದು ಆರಂಭವಾಗಿರುವ ಬಸವಜ್ಯೋತಿ ರಥಯಾತ್ರೆಯನ್ನು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಮೂಲಕ ಸೆ.7ರಂದು ನಗರಕ್ಕೆ ಆಗಮಿಸಲಿದೆ. ಅಂದು ಬೆಳಗ್ಗೆ ಕೊಟ್ಟೂರು ಶ್ರೀ ಮಠದಲ್ಲಿ ಸ್ವಾಗತಿಸಿಕೊಂಡು, ಬಳಿಕ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಮುಕ್ತ ಸಂವಾದವನ್ನು ವಿಜಯನಗರ ಕಾಲೇಜಿನ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 3.30ರಿಂದ ಇಲ್ಲಿನ ಡಾ.ಪುನೀತ್ ರಾಜ ಕುಮಾರ ವೃತ್ತದಿಂದ ವಿಶ್ವಗುರು ಬಸವಣ್ಣ ವೃತ್ತದವರೆಗೆ ಬಸವಜ್ಯೋತಿಯೊಂದಿಗೆ ವಚನ ವಿಜಯೋತ್ಸವ ನಡೆಯಲಿದೆ. ಸಂಜೆ 6ಕ್ಕೆ ಸಾರ್ವಜನಿಕ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ನಡೆಯಲಿದೆ. ನಂತರ ವಿವಿಧ ಮಠಾಧೀಶರಿಂದ ಹಾಗೂ ಇತರರಿಂದ ಉಪನ್ಯಾಸ ನಡೆಯಲಿದೆ. ಈಗಾಗಲೇ ನಡೆದಿರುವ ಪ್ರಬಂಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾತ್ರಿ 8ಕ್ಕೆ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಡಾ.ಕೆ.ರವೀAದ್ರನಾಥ ಮಾತನಾಡಿ, ಯಾತ್ರೆ ಕೊಪ್ಪಳ ಮೂಲಕ ಅ.01ರಂದು ಬೆಂಗಳೂರು ತಲುಪಲಿದ್ದು, ಅ.5ರಂದು ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಮಹಾಬಲೇಶ್ವರ ರೆಡ್ಡಿ, ಪ್ರಮುಖರಾದ ಎಲ್.ಬಸವರಾಜ, ಬಸವ ಕಿರಣ ಸ್ವಾಮೀಜಿ, ಐ.ಸಂಗನಬಸಪ್ಪ, ಬಿ.ಚಿತ್ತಪ್ಪ, ಕೋರಿಶೆಟ್ಟರ್ ಲಿಂಗಪ್ಪ, ಕಿಚಿಡಿ ಕೊಟ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net