

ಹೊಸಪೇಟೆ: ಕರ್ತವ್ಯದ ಮೇಲೆ ರಾಜಸ್ಥಾನದ ಜೋದ್‌ಪುರಕ್ಕೆ ತೆರಳಿದ್ದ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಹಾಲಪ್ಪ (56) ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಜೋದ್‌ಪುರಕ್ಕೆ ಆ.17ರ ಭಾನುವಾರ ಕರ್ತವ್ಯದ ನಿಮಿತ್ತ ಎಚ್‌ಪಿಸಿ ಶಬ್ಬಿರ್, ಪಿಸಿ ಚಂದ್ರಪ್ಪ ಜತೆ ನಗರದಿಂದ ತೆರಳಿದ್ದರು. ಲಾಡ್ಜ್ನಲ್ಲಿ ಮೈ ಬೆವರು ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡು ಗಂಟೆಗಳ ಕಾಲ ಚಿಕಿತ್ಸೆ ಕೊಡಿಸಲಾಗಿದೆ. ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಸ್ವಗ್ರಾಮ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಹಾಲಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ.