

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಹಗರಿಬೊಮ್ಮನಹಳ್ಳಿ ತಾಲೂಕಿನ ವಿಶ್ವ ಪರಂಪರೆ ತಾಣ ಅಂಕಸಮುದ್ರ ಪಕ್ಷಿಗಳ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಮೂರು ಮಾದರಿಯಲ್ಲಿ ಐಲ್ಯಾಂಡ್ ನಿರ್ಮಿಸಿದ್ದು, ಪಕ್ಷಿಗಳ ವಾಸಕ್ಕೆ ಅನುಕೂಲವಾಗಿದೆ.
ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿರುವ ಅಂಕಸಮುದ್ರ ಕೆರೆಯ 244 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಾವಿರಾರು ಕರಿಜಾಲಿ ಮರಗಳಿವೆ. ದೇಶ-ವಿದೇಶಗಳ 140ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿಗೆ ಬಂದು ನೆಲೆಸುತ್ತಿವೆ. ಕೆಲವು ಸಂತಾನೋತ್ಪತ್ತಿ ನಡೆಸುತ್ತವೆ. ಆದರೆ, ಕೆಲ ವರ್ಷಗಳಿಂದ ನಿರಂತರವಾಗಿ ನೀರು ನಿಲ್ಲುತ್ತಿದ್ದು, ಮರಗಳು ಒಣಗಿ ಬೀಳುತ್ತಿವೆ. ಈವರೆಗೆ ಅಂದಾಜು 100ಕ್ಕೂ ಹೆಚ್ಚು ಮರಗಳು ಮುರಿದಿವೆ. ಆದ್ದರಿಂದ ವೃಕ್ಷಗಳ ರಕ್ಷಣೆ ಹಾಗೂ ಪಕ್ಷಿಗಳ ಆಶ್ರಯಕ್ಕಾಗಿ ಅರಣ್ಯ ಇಲಾಖೆ ವಿವಿಧ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಬರ್ಡ್ಸ್ ಐಲ್ಯಾಂಡ್, ನಾಲ್ಕು ರಾಕ್ ಐಲ್ಯಾಂಡ್, ಒಂದು ಪೆಬ್ಬಲ್ ಐಲ್ಯಾಂಡ್ ನಿರ್ಮಾಣ ಮಾಡಿದೆ. ಇದರಿಂದ ಪಕ್ಷಿಗಳು ಗೂಡು ಕಟ್ಟಿ ಆಶ್ರಯ ಪಡೆಯಲಿವೆ. ಬೇಟೆಯಾಡಿದ ಆಹಾರ ಸೇವನೆ, ವಿಶ್ರಾಂತಿ ಹಾಗೂ ರೆಕ್ಕೆಗಳನ್ನು ಉದುರಿಸಲು ಪೆಬ್ಬಲ್ ಹಾಗೂ ರಾಕ್ ಐಲ್ಯಾಂಡ್ ಸಹಕಾರಿಯಾಗಿಲಿವೆ.
ಸಾವಿರಾರು ಹಕ್ಕಿಗಳಿಗೆ ಅಂಕಸಮುದ್ರ ಕೆರೆಯ ಕರಿಜಾಲಿಗಿಡಗಳೇ ಆಶ್ರಯ ತಾಣವಾಗಿವೆ. ತುಂಬ ಹಳೆಯದಾದ ಈ ಕೆರೆ ಕೆಲ ದಶಕಗಳ ಹಿಂದೆ ನೀರಿಲ್ಲದೆ ಖಾಲಿಯಾಗಿದ್ದಾಗ ಅಕ್ಕಪಕ್ಕದ ಹೊಲದವರು ಒತ್ತುವರಿಗೆ ಮುಂದಾದರು. ಇದನ್ನು ಕಂಡು ಗ್ರಾಮದ ಕೆಲ ಮುಖಂಡರು ಸಾಮಾಜಿಕ ಅರಣ್ಯ ಯೋಜನೆಯಡಿ ಕೆರೆಯ ಅಂಚಿನುದ್ದಕ್ಕೂ ಕರಿಜಾಲಿ ಗಿಡಗಳನ್ನು ನೆಟ್ಟರು. ನಂತರ ಕೆರೆಗೆ ಏತನೀರಾವರಿ ಮೂಲಕ ನೀರುಣಿಸುವ ಪ್ರಯತ್ನ ಮಾಡಲಾಯಿತು.ಕೆಲ ವರ್ಷಗಳ ನಂತರ ಇದೂ ವಿಫಲವಾಯಿತು. ಆದರೆ, ಕರಿಜಾಲಿ ಗಿಡಗಳು ಒಂದೇ ಸಮನೆ ಬೆಳೆದು ಕೆರೆ ತುಂಬ ಹರಡಿಕೊಂಡವು. ಹೀಗಾಗಿ ಜನರ ಓಡಾಟವೂ ಕಡಿಮೆಯಾಯಿತು. ಪಕ್ಕದ ತುಂಗಭದ್ರೆಯಲ್ಲಿ ಇಡೀ ದಿನ ಬೇಟೆಯಾಡುವ ಹಲವು ಪ್ರಭೇದದ ಹಕ್ಕಿಗಳಿಗೆ ರಾತ್ರಿವಾಸಕ್ಕೆ ಈ ಕೆರೆ ಸುರಕ್ಷಿತ ನೆಲೆ ಒದಗಿಸಿತು. ತೆರೆದ ಕೊಕ್ಕಿನ ಕೊಕ್ಕರೆ, ಬಿಳಿ ಕತ್ತಿನ ಕೊಕ್ಕರೆ, ಕೆನ್ನೀಲಿ ಬಕಪಕ್ಷಿಗಳು, ಗೋವಕ್ಕಿಗಳು ಸೇರಿ ಅನೇಕ ಪ್ರಭೇದದ ಸಾವಿರಾರು ಹಕ್ಕಿಗಳು ಅಂಕಸಮುದ್ರ ಕೆರೆಯನ್ನು ಕಾಯಂ ನೆಲೆಯನ್ನಾಗಿಸಿಕೊಂಡವು.
ಕೆರೆಯಲ್ಲಿ ಒಂದು ಕಡೆ ಎತ್ತರ ಪ್ರದೇಶ ಮಾಡಿ ಅಲ್ಲಿ ಕರಿ ಜಾಲಿ, ಬಿದಿರು, ರೈನ್ ಟೀ, ಬೇರಿಂಗ್ ಟೋನಿಯ ಎಂಬ ಮರಗಳನ್ನು ಬೆಳೆಸುವ ಯೋಜನೆಯಾಗಿದೆ. ಇದರ ಮೇಲೆ ಪಕ್ಷಿಗಳು ಗೂಡು ಕಟ್ಟಲು ಹಾಗೂ ವಿಶ್ರಾಂತಿ ಪಡೆಯಲಿವೆ. ಈ ಹಿಂದೆ ಆರು ಬರ್ಡ್ಸ್ ಐಲ್ಯಾಂಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು 20 ಬರ್ಡ್ಸ್ ಐಲ್ಯಾಂಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಪೆಬ್ಬಲ್ ಐಲ್ಯಾಂಡ್ ಎಂದರೆ ನೆಲ ಪ್ರದೇಶ ಸ್ವಲ್ಪ ಎತ್ತರ ಮಾಡಿ ನೀರಲ್ಲಿನ ಸಣ್ಣಕಲ್ಲುಗಳಿಂದ ನೆಲ ನಿರ್ಮಾಣ ಮಾಡಲಾಗುತ್ತದೆ. ರಾಕ್ ಐಲ್ಯಾಂಡ್ ಎತ್ತರವಾಗಿ ನಿರ್ಮಾಣ ಮಾಡಿ ಅದರಲ್ಲಿ ದೊಡ್ಡ ಗಾತ್ರದ ಕಲ್ಲು, ಬಂಡೆಗಳನ್ನು ಜೋಡಣೆ ಮಾಡಲಾಗುತ್ತದೆ. ಇದರಿಂದ ಹಕ್ಕಿಗಳಿಗೆ ಆಶ್ರಯ ಪಡೆಯಲು ಹಾಗೂ ಬೇಟೆಯಾಡಿದ ಆಹಾರ ತಿನ್ನಲು ಸಹಾಯವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಅರಣ್ಯಾಧಿಕಾರಿಗಳು.
ಅಂಕಸಮುದ್ರ ಕೆರೆಯಲ್ಲಿ ಕೆಲ ಮರಗಳು ಒಣಗಿ ಮುರಿದು ಬೀಳುತ್ತಿವೆ. ಕೆರೆಯಲ್ಲಿ ಆಶ್ರಯ ಪಡೆಯುವ ಅನೇಕ ಪ್ರಭೇದದ ಸಾವಿರಾರು ಹಕ್ಕಿಗಳ ಅನುಕೂಲಕ್ಕಾಗಿ ಐಲ್ಯಾಂಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅರ್ಸಲಾನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ