

ಹೊಸಪೇಟೆ: ಹನುಮ ಮಾಲೆ ಧರಿಸಿದ ಭಕ್ತರು ಗುರುವಾರ ತಂಡೋಪತಂಡವಾಗಿ ನಗರ ಹಾಗೂ ಕಮಲಾಪುರ ಮೂಲಕ ಹಂಪಿಗೆ ಬಂದು, ಕೊಪ್ಪಳ ಜಿಲ್ಲೆಯ ಅಂಜನಾದ್ರಿಯತ್ತ ತೆರಳಿದರು.
ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಬಳ್ಳಾರಿ ಜಿಲ್ಲೆಯ ಸಂಡೂರು, ನ ಕೊಪ್ಪಳ ಸಹಿತ ದೂರದ ಊರುಗಳಿಂದ ಬಂದ ಭಕ್ತರು ಹೊಸಪೇಟೆ ಮೂಲಕ ಪಾದಯಾತ್ರೆಯಲ್ಲಿ ಹಂಪಿಗೆ ಬಂದು ಕೆಲವರು ಅಲ್ಲೇ ತಂಗಿದರು. ಇನ್ನು ಕೆಲವರು ಅಂಜನಾದ್ರಿಯತ್ತ ತೆರಳಿದರು. ಕೆಲವರು ಆನೆಗುಂದಿಯಲ್ಲಿ ಗುರುವಾರ ರಾತ್ರಿ ವಿಶ್ರಾಂತಿ ಪಡೆದರು. ನಗರದ ನೂರಾರು ಜನ ಸಹ ಗುರುವಾರವೇ ಪಾದಯಾತ್ರೆ ಆರಂಭಿಸಿದರು.
ಪುಟಾಣಿ ಮಕ್ಕಳು ಸಹ ಕೇಸರಿ ಬಟ್ಟೆ ಧರಿಸಿ ಪಾದಯಾತ್ರೆ ನಡೆಸಿದರು. ಕೆಲವರು ಪೋಷಕರ ಹೆಗಲೇರಿ ಕುಳಿತಿದ್ದರು. ಹಂಪಿ ರಸ್ತೆ ಕೇಸರಿಮಯವಾಗಿತ್ತು. ದಾರಿ ಮಧ್ಯೆ ಹಲವೆಡೆ ಪಾನಕ, ಮಜ್ಜಿಗೆ, ನೀರು ವಿತರಿಸಲಾಗುತ್ತಿತ್ತು. ಹಲವಾರು ಜನ ಹಂಪಿಯ ಸಾಲು ಮಂಟಪಗಳಲ್ಲಿ, ಯಂತ್ರೋದ್ಧಾರಕ ದೇವಸ್ಥಾನ ಸಮೀಪದ ಮಂಟಪಗಳಲ್ಲಿ ತಂಗಿದರು.
ಹನುಮ ಮಾಲಾಧಾರಿಗಳು ಶುಕ್ರವಾರ ಅಂಜನಾದ್ರಿ ಬೆಟ್ಟದ ಮೇಲೆ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಆದರೆ ಸಾವಿರಾರು ಮಂದಿ ಗುರುವಾರವೇ ಪಾದಯಾತ್ರೆಯಲ್ಲಿ ಹಂಪಿ ಮೂಲಕ ತೆರಳಿದ್ದಾರೆ. ಶುಕ್ರವಾರ ಲಕ್ಷಾಂತರ ಜನ ಅಂಜನಾದ್ರಿಗೆ ಬರಲಿದ್ದು, ಬೆಟ್ಟ ಏರುವುದಕ್ಕೆ ಕನಿಷ್ಠ ನಾಲ್ಕು ಗಂಟೆ ಸಮಯ ಹಿಡಿಯಬಹುದು ಎಂದು ಹೊಸಪೇಟೆಯಿಂದ ಪಾದಯಾತ್ರೆ ಕೈಗೊಳ್ಳಲಾಗಿದೆ.