ಅಂಗವಿಕಲರು ಮಾನಸಿಕವಾಗಿ ಸದೃಡರಾಗಿ

03 MANJU 02
Published on

ಹೊಸಪೇಟೆ: ಅಂಗವಿಕಲರು ತಮ್ಮದೇ ಸಾಮರ್ಥ್ಯಗಳು, ಕೌಶಲ್ಯಗಳು ಹಾಗೂ ಪ್ರತಿಭೆಗಳ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿರುವ ಹಲವಾರು ಉದಾಹರಣೆಗಳಿವೆ. ಅವರು ಕಲ್ಪನೆಗಳಿಗಿಂತಲೂ ಹೆಚ್ಚಾಗಿ ಸಾಧನೆ ಮಾಡಬಲ್ಲರು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಕಾನೂನು ಸೇವಾ ಸಮಿತಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗವಿಕರ ಬಗ್ಗೆ ಇರುವ ಕೀಳಿರಿಮೆ ನಿವಾರಿಸಿ, ಅವರ ಜೀವನವನ್ನು ಹೆಚ್ಚು ಸುಗಮಗೊಳಿಸಲು ನಮ್ಮೆಲ್ಲರ ಸಹಕಾರ ಅಗತ್ಯ. ಇದು ಕೇವಲ ಅವರಿಗೆ ಸವಲತ್ತು ನೀಡುವ ಪ್ರಶ್ನೆಯಲ್ಲ, ಬದಲಾಗಿ ಸಮಾನ ಅವಕಾಶಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬ ಸಿದ್ಧಾಂತವನ್ನು ಬೆಂಬಲಿಸಬೇಕಿದೆ. ಅಂಗವಿಕಲರು ಸಮಾಜದಲ್ಲಿ ಯಾವುದಕ್ಕೂ ಎದೆಗುಂದದೆ ಜೀವನ ನಡೆಸುವ ಮನೋಭಾವ ಬೆಳೆಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಕಲಚೇತನರ ದಿನಾಚರಣೆ ಮಾಡಲಾಗುತ್ತದೆ. ಅವರಿಗೆ ಎಲ್ಲ ರೀತಿಯ ಸಹಾಯ ಸೌಲಭ್ಯವನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು. ನಿಮ್ಮ ಸಾಧನೆಯಲ್ಲಿ ಮಾನಸಿಕವಾಗಿ ಸದೃಡರಾಗಿ ಸಾಧನೆಯತ್ತ ಸಾಗಬೇಕು. ಪ್ರತಿ ಹತ್ತು ಸಾಧಕರಲ್ಲಿ ಇಬ್ಬರು ನೀವಾಗಿರಬೆಕು ಎಂದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 9 ವ್ಹೀಲ್‌ಚೇರ್, 10 ಶ್ರವಣ ಸಾಧನ, 4 ಎಂ.ಆರ್ ಕಿಟ್‌ಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಲಕರಿಗೆ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನೆಹರು ಕಾಲೋನಿಯ ಸಹಕಾರಿ ಕಲ್ಯಾಣ ಮಂಟಪದಿAದ ಮಸೀದಿ ಮಾರ್ಗವಾಗಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಶ್ರೀ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net