

ಹೊಸಪೇಟೆ: ಅಲೆಮಾರಿ ಸಮುದಾಯಗಳಿಗೆ ಶೇ.3ರಷ್ಟು ಮೀಸಲು ನಿಗಧಿಪಡಿಸಲು ಆಗ್ರಹಿಸಿ ಡಿ.18 ರಂದು ಅಲೆಮಾರಿ ಸಮೂದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಬೆಳಗಾವಿಯ ಸುವರ್ಣ ಸೌಧ ಚಲೋ ಹೋರಾಟ ಹಮ್ಮಿ ಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಸಣ್ಣ ಮಾರೆಪ್ಪ ಹೇಳಿದ್ಧಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟಿನ ಸೂಚನೆಯಂತೆ ರಾಜ್ಯ ಸರ್ಕರಗಳೇ ಒಳ ಮೀಸಲು ಜಾರಿಗೆ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ರಚಿಸಿದೆ. ಆದರೆ, ಈ ಹಿಂದೆ ಒಳಮೀಸಲು ವರ್ಗೀಕರಣದಲ್ಲಿ ಅಲೆಮಾರಿ ಸಮೂದಾಯಗಳಿಗೆ ಶೇ.1ರಷ್ಟು ಮಾತ್ರ ಮೀಸಲು ನಿಗಧಿಗೊಳಿಸಲಾಗಿದೆ. ಸರಿ ಸುಮಾರು 5 ಲಕ್ಷ ಜನಸಂಖ್ಯೆ ಹೊಂದಿರುವ 49 ಅಲೆಮಾರಿ ಸಮುದಾಯಗಳಿಗೆ ಒಂದರಷ್ಟು ಮೀಸಲಾತಿಯಿಂದ ಅನ್ಯಾಯವಾಗಲಿದ್ದು ಶೈಕ್ಷಣಿಕ, ಉದ್ಯೋಗಗಳಿಂದ ಮತ್ತೊಮ್ಮೆ ವಂಚನೆಗೆ ಒಳಗಾಗುವಂತಾಗುತ್ತದೆ ಎಂದರು.
ಅಲೆಮಾರಿಗಳಿಗೆ ವಸತಿ ಸೌಲಭ್ಯ ನೀಡಬೇಕು. ಹಂಪಿ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪಿಸುವುದು, ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿಗೆ ಎಲ್ಲಾ ವ್ಯವಸ್ಥೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ನಡೆಯಲಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಸಾವಿರ ಜನರು ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರಮುಖರಾದ ಶೇಖಪ್ಪ ಕಿನ್ನರಿ, ಎಸ್.ಬಿ.ಮಂಜುನಾಥ, ರಮೇಶ್ವಜೋಗಿ, ಎಸ್.ಕೆ.ಚೌಡಪ್ಪ, ಸಿದ್ದುಬೆಳಗಲ್, ದೊಡ್ಡ ಚಮಲಪ್ಪ ಇತರರಿದ್ದರು.