

ಹೊಸಪೇಟೆ: ರಾಜ್ಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಿರ್ಮಾಣ ಆಗದೇ ಇರುವ ಏಮ್ಸ್ ಆಸ್ಪತ್ರೆ ರಾಯಚೂರಿನಲ್ಲಿಯೆ ಆದಷ್ಟುಬೇಗ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಜು.16ರಂದು ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಅಶೋಕ ಕುಮಾರ ಜೈನ್ ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಜಿಲ್ಲೆಯಲ್ಲಿ ಮೂಲಸೌಕರ್ಯ, ವೈದ್ಯಕೀಯ, ಶೈಕ್ಷಣಿಕ, ರಾಜಕೀಯ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಜನಪ್ರಗತಿ ನಿಧಿಗಳ ಇಚ್ಛಾಶಕ್ತಿ ಕೊರತೆಯಲ್ಲಿ ಸೊರಗುತ್ತಿದೆ. ಅಪೌಷ್ಟಿಕತೆಯಲ್ಲಿಯೂ ದೇಶದ ಗಮನ ಸೆಳೆದಿದ್ದೆ.
ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಏಮ್ಸ್ ಅವಶ್ಯಕತೆ ಇದೆ. ಮುಖ್ಯಮಂತ್ರಿ, ಆರೋಗ್ಯ ಸಚಿವರು ನಮ್ಮ ಮನವಿಗೆ ಆದ್ಯತೆ ನೀಡಬೇಕು. ಕಲ್ಯಾಣ ಕರ್ಮಾಟಕದದ ಅಭಿವೃದ್ಧಿಗೆ ಹಾಗೂ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಆರೋಗ್ಯ ವೃದ್ಧಿಗೆ ಕೇಂದ್ರ ಸರ್ಕಾರ ರಾಯಚೂರಿನಲ್ಲಿಯೆ ಏಮ್ಸ್ ಸ್ಥಾಪನೆಗೆ ಮುಂದಾಗಬೇಕು. ಆದ್ದರಿಂದ ಬಜೆಟ್‌ನಲ್ಲಿ ಅನುದಾನ ನೀಡಿ, ಏಮ್ಸ್ ಆರಂಭಕ್ಕೆ ಮುಂದಾಗದಿದ್ದರೆ, ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಬೋಡಾರಾಮಪ್ಪ, ಪಿ.ವೆಂಕಟೇಶ, ಗುಜ್ಜಲ ಗಣೇಶ್, ಪರಮೇಶಗೌಡ, ಮಧುರಚೆನ್ನಶಾಸ್ತ್ರಿ, ಘಂಟೆ ಸೋಮಶೇಖರ, ಭರತ್ ಕುಮಾರ ಬಾಲೆಸಾಬ್ ಇತರರಿದ್ದರು.