ಎಎನ್ಎಂ ಕೇಂದ್ರ ಮುಚ್ಚುವ ಆದೇಶ ಹಿಂಪಡೆಯಲಿ

29 MANJU 06
Published on

ಹೊಸಪೇಟೆ: ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು (ಎಎನ್‌ಎಂ) ಮುಚ್ಚುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧಿಸಿ ಎಐಡಿವೈಓ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಡಾ.ರ‍್ರಿಸ್ವಾಮಿ ಎಚ್.ಮುಂಡ್ರಿಗಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ವರ್ಷಗಳ ಈ ಕೋರ್ಸ್ಗೆ ಹಲವಾರು ಯುವತಿಯರು ಜನವರಿಯಲ್ಲೇ ಪ್ರವೇಶ ಪಡೆದು ತರಬೇತಿ ಪಡೆಯುತ್ತಿದ್ದರೂ, ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಲ್ಲ ಎಎನ್‌ಎಂ ತರಬೇತಿ ಕೇಂದ್ರಗಳನ್ನು ಮುಚ್ಚಲು ಆರೋಗ್ಯ ಇಲಾಖೆ ಮುಂದಾಗಿರುವುದು ಯುವಜನ ವಿರೋಧಿ ಕ್ರಮವಾಗಿದೆ. ಮಧ್ಯಂತರದಲ್ಲೇ ತರಬೇತಿಯಿಂದ ವಂಚಿತರಾಗುತ್ತಿರುವರಿಗೆ ರಾಜ್ಯದಲ್ಲಿರುವ 18 ಸರ್ಕಾರಿ ಡಿಪ್ಲೊಮಾ ನರ್ಸಿಂಗ್ ಶಾಲೆಗಳಿಗೆ (ಜಿಎನ್‌ಎಂ) ಸೇರಲು ಅವಕಾಶ ನೀಡಿದ್ದರೂ, ಮೂರು ವರ್ಷಗಳ ಡಿಪ್ಲೊಮಾ ನರ್ಸಿಂಗ್ ಸೇರಲು ಬಯಸದವರನ್ನು ಮನೆಗೆ ಕಳುಹಿಸಲು ಸೂಚನೆ ನೀಡಲಾಗಿದೆ. ಹಾಗೂ ಇದರಿಂದ ಹಲವಾರು ಜನ ವಿದ್ಯಾರ್ಥಿನಿಯರನ್ನು ತಮ್ಮ ಆಯ್ಕೆಯ ತರಬೇತಿಯಿಂದ ಯಾವೂದೇ ಮುನ್ಸೂಚನೆ ಇಲ್ಲದೇ ಹೊರದೂಡಿದಂತೆ ಆಗುತ್ತದೆ ಎಂದು ಆಗ್ರಹಿಸಿದರು.

ಈ ಎಎನ್‌ಎಂ ತರಬೇತಿ ಪಡೆದವರು ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಎಂದು ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಶಾಗಳೊಂದಿಗೆ ಸೇರಿ ಹಳ್ಳಿಯಲ್ಲಿಯ ಬಾಣಂತಿ ಮತ್ತು ಇತರೆ ರೋಗಿಗಳ ಸೂಕ್ತ ಚಿಕಿತ್ಸೆಯ ಕುರಿತು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ, ವೆಚ್ಚ ನಿರ್ವಹಣೆಯ ಹೆಸರಲ್ಲಿ ಇಂಥಹ ತರಬೇತಿಗಳನ್ನು ಹಾಗೂ ಹುದ್ದೆಗಳನ್ನು ರದ್ದು ಮಾಡುವ ಕ್ರಮವು ಗ್ರಾಮೀಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ತರಬೇತಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತಿರುವ ಕಾರಣ ಕಾನೂನಿನ ತೊಡಕಿನಿಂದ ತಾನು ತಪ್ಪಿಸಿಕೊಳ್ಳಲು, ಸ್ವ ಇಚ್ಛೆಯಿಂದ ಡಿಪ್ಲೊಮಾ ನರ್ಸಿಂಗ್‌ಗೆ ಸೇರುತ್ತಿರುವುದಾಗಿ ತರಬೇತಿದಾರರಿಂದ ಹಾಗೂ ಅವರ ಪಾಲಕರಿಂದ ಸಮ್ಮತಿ ಪತ್ರ ಬರೆಸಿಕೊಳ್ಳುವ ಕಳ್ಳ ಮಾರ್ಗವನ್ನು ಆರೋಗ್ಯ ಇಲಾಖೆಯು ಹಿಡಿದಿದೆ. ಆದ್ದರಿಂದ ಎಎನ್‌ಎಂ ತರಬೇತಿ ಕೇಂದ್ರಗಳನ್ನು ಮುಚ್ಚುವ ಕ್ರಮವನ್ನು ವಿರೋಧಿಸಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net