

ಹೊಸಪೇಟೆ: ರೈತರು ರಾಸಯಿನಕ ಗೊಬ್ಬರಗಳನ್ನು ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಉತ್ತಮ ಬೆಳೆಗಳನ್ನು ಬೆಳೆಯಬಹುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆಯಿಂದ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃಷಿ ಪರಿಕರಗಳ ಹಾಗೂ ರೈತರಿಗೆ ಭತ್ತದ ಬೀಜ ವಿತರಣೆ ಮತ್ತು ಮಣ್ಣು ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು.
ರೈತರು ತಮ್ಮ ಬೆಳೆಗಳಿಗೆ ಒಂದು ಸಾರಿ ಲಾಭ ಮತ್ತು ನಷ್ಟವನ್ನು ಅನುಭವಿಸುತ್ತಾರೆ. ಅದರೆ ರೈತರು ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಹೆಚ್ಚಿನ ಮಟ್ಟದಲ್ಲಿ ನಷ್ಟವನ್ನು ಅನುಭವಿಸುವುದಿಲ್ಲ. ಸರ್ಕಾರದಿಂದ ಬರುವ ಭಿತ್ತನೆ ಬೀಜ ವಿತರಣೆ ಪೂರೈಕೆ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಪಿ.ವಿ.ಸಿ ಪೈಪುಗಳ ವಿತರಣೆ ಯೋಜನೆ, ಕೃಷಿ ಭಾಗ್ಯ ಯೋಜನೆಗಳನ್ನು ರೈತರು ಸದುಪಯೋಗ ಪಡಿದುಕೊಳ್ಳಬೇಕು ಎಂದರು.
ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಅತಿ ಅವಶ್ಯಕ. ಹೊಸಪೇಟೆಗೆ ಸಿಎಂ ಬಂದಾಗೆಲ್ಲ ನನಗೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಕಾರ್ಖಾನೆ ಸ್ಥಾಪನೆಗೆ 100ರಿಂದ 150 ಕೋಟಿ ರೂ. ಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮುಂದು ವರೆಯಬೇಕಿದೆ. ಮೇ 20ರಂದು ಸಾಧನ ಸಮಾವೇಶಕ್ಕೆ ಬರಲಿದ್ದಾರೆ. ಅಂದು ಕಾರ್ಖಾನೆ ನಿರ್ಮಾಣ ಅಂತಿಮ ಹಂತದ ತಿರ್ಮಾನ ಮಾಡಿಕೊಂಡು, ನಿರ್ಮಾಣದ ಕಡೆ ಚಿಂತನೆ ನಡೆಸಬೇಕಿದೆ ಎಂದರು.
ನಗರದ ಕೊಂಡನಾಯಕನಹಳ್ಳಿ ಗ್ರಾಮದ ನಿವಾಸಿಯಾದ ನಾಗಮ್ಮ 2023-24 ಸಾಲಿನ ರಾಜ್ಯ ಮಟ್ಟದ ಬೆಳೆ ಸ್ಪರ್ಧೆ ಯೋಜನೆಯಡಿ ಭಾಗವಹಿಸಿ ಪರಿಶಿಷ್ಟ ಜಾತಿ ಮಹಿಳಾ ವಿಭಾಗದಲ್ಲಿ ಭತ್ತದ ಬೆಳೆಯಲ್ಲಿ ಒಂದು ಎಕರೆಗೆ 128 ಕ್ವಿಂಟಾಲ್ ಬೆಳೆದು ಮತ್ತು ಬೆಂಗಳೂರಿನಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ನಗರದ ರೂಪ ಅವರಿಗೆ ಶಾಸಕರಿಂದ ಸನ್ಮಾನಿಸಲಾಯಿತು. ಫಲಾನುಭವಿ ರೈತರಿಗೆ ಪಿ.ವಿ.ಸಿ ಪೈಪು, ನಡಕಟ್ಟಿನ ಕೂರಿಗೆ ಇನ್ನಿತರ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು.