

ಹೊಸಪೇಟೆ: ಹಡಗಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ರಸ್ತೆ ಮೇಲೆ ಬೆಳೆಗಳನ್ನು ಒಕ್ಕುವುದು, ಧಾನ್ಯಗಳನ್ನು ಒಣಗಿಸುವಂತಹ ಕೃಷಿ ಚಟುವಟಿಕೆ ನಡೆಸುತ್ತಿರುವುದರಿಂದ ರಸ್ತೆ ಅಪಘಾತಗಳು ನಡೆಯದಂತೆ ರೈತರಿಗೆ ಮನವೊಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.
ರಸ್ತೆಗಳ ಮೇಲೆ ಕೃಷಿ ಚಟುವಟಿಕೆ ನಡೆಸುತ್ತಿರುವುರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಕೆಲ ಸಂದರ್ಭದಲ್ಲಿ ಬೆಂಕಿ ಅವಘಡಗಳು ಹಾಗೂ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿರುತ್ತಿದೆ. ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಚರ್ಚೆಗೆ ಬಂದಿದೆ. ಆದ್ದರಿಂದ ಆಯಾ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಪೋಲಿಸ್ ಇನ್ ಸ್ಪೆಕ್ಟರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, & ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ತಂಡವನ್ನು ರಚನೆ ಮಾಡಿ ತಕ್ಷಣವೇ ಇಂತಹ ಘಟನೆಗಳ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಮನವೊಲಿಸುವ ಕಾರ್ಯ ನಡೆಯಬೇಕಿದೆ. ಅಪಘಾತಗಳ ಬಗ್ಗೆ ತಿಳುವಳಿಕೆ ನೀಡಿ ಕೃಷಿ ಚಟುವಟಿಕೆಗಳ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.