ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿರಲಿ

18 MANJU 03
Published on

ಹೊಸಪೇಟೆ: ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತರೆ ಇಲಾಖೆಗಳ ಸಂಯಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ, ಕಾನೂನು ಬದ್ಧ ದತ್ತು ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ನಗರದ ಟಿಎಚ್‌ಒ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕು. ದತ್ತು ಪಡೆಯುವುದು ಹಾಗೂ ನೀಡುವುದು ಈಗ ಕಾನೂನು ಬದ್ಧವಾಗಿದೆ. ಕಾನೂನು ಮೀರಿ ಯಾರೂ ನಡೆದುಕೊಳ್ಳಬಾರದು. ಎಲ್ಲರಿಗೂ ಕಾನೂನಿನ ಅರಿವು ಅತಿ ಮುಖ್ಯ ಎಂದರು.

ಜಿಲ್ಲಾ ಮಕ್ಕಳ ಆರೋಗ್ಯಾಧಿಕಾರಿ ಎಂ.ಪಿ. ದೊಡಮನಿ ಮಾತನಾಡಿ, ಈಗ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಎಲ್ಲಾ ದೇಶಗಳು ಮುಂದಾಗಿವೆ. ಭಾರತದಲ್ಲೂ ಮಕ್ಕಳ ಹಕ್ಕುಗಳ ಬಗ್ಗೆ ಹಲವು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಈ ಪೈಕಿ ಮಕ್ಕಳ ದತ್ತು ಪಡೆಯುವುದಕ್ಕಾಗಿ ಬಾಲ ನ್ಯಾಯ ಕಾಯ್ದೆಯನ್ನು ಕೂಡ ಜಾರಿ ಮಾಡಲಾಗಿದೆ. ಇದರ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ, ಮಕ್ಕಳ ಹಕ್ಕುಗಳು ಹಾಗೂ ದತ್ತು ಪಡೆಯಲು ಇರುವ ಕಾನೂನಿನ ಕುರಿತು ವಿಷಯ ಮಂಡಿಸಿದರು. ಸರ್ಕಾರಿ ವಿಶೇಷ ದತ್ತುಸಂಸ್ಥೆಯ ಜಿಲ್ಲಾ ಸಂಯೋಜಕಿ ವಿದ್ಯಾಬಾಯಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಷಣ್ಮುಖ, ಪಂಪಾಪತಿ, ಯಶೋಧಾ, ನೇತ್ರಾವತಿ, ಬಷೀರ, ಲಲಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net