ನಗರಸಭೆ ದಾಖಲೆ ನಾಪತ್ತೆ ಆರೋಪ, ಸಮರ್ಪಕ ಉತ್ತರ ನೀಡದೆ ಪೇಚಿಗೆ ಸಿಲುಕಿದ ಪೌರಾಯುಕ್ತ

B.T. BANDIVADDAR
ಬಿ.ಟಿ.ಬಂಡಿವಡ್ಡರ್
Published on

ಹೊಸಪೇಟೆ: ನಗರಸಭೆಯಲ್ಲಿ ಮಹತ್ವದ ದಾಖಲೆಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಲು ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್, ಸೂಕ್ತ ಕಡತಗಳನ್ನು ಪ್ರದರ್ಶಿಸಲಾಗದೆ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.

ನಗರಸಭೆಯಿಂದ ಯಾವುದೇ ಕಡತಗಳು ನಾಪತ್ತೆಯಾಗಿಲ್ಲ. ಎಲ್ಲವೂ ಭದ್ರವಾಗಿವೆ. ಈ ಕುರಿತು ನಮ್ಮದೇ ಸಿಬ್ಬಂದಿ ಹೆಸರಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರಿಗೆ ರವಾನಿಸಿದ ಪತ್ರ ನಕಲಿಯಾಗಿದೆ. ಈ ಕುರಿತು ಸಂಬಂಧಿಸಿದ ವಿಭಾಗದವರಿಗೆ ನೋಟಿಸ್ ನೀಡಲಾಗಿತ್ತು. ಅವರು ದಾಖಲೆಗಳನ್ನು ಪರಿಶೀಲಿಸಿ ಎಲ್ಲ 49 ಲಭ್ಯವಿದೆ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ. ಈ ಬಗ್ಗೆ ಸಾರ್ವಜಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಗಿಳಿಪಾಠ ಹೇಳಿದರು.

ಆದರೆ, ಪೌರಾಯುಕ್ತರ ಸಮಕ್ಷಮದಲ್ಲಿ ಕರವೇ ಪದಾಧಿಕಾರಿಗಳು ನಡೆಸಿದ ಫೈಲ್‌ಗಳ ಪರಿಶೀಲನೆಯಲ್ಲಿ 13 ದಾಖಲೆಗಳು ನಾಪತ್ತೆಯಾಗಿವೆ ಎಂದು ತಾವೇ ಒಪ್ಪಿಕೊಂಡಿದ್ದೀರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಆ ದಿನ 13 ದಾಖಲೆಗಳು ಲಭ್ಯವಿರಲಿಲ್ಲ. ಈ ಕುರಿತು ಹಿಂದಿನ ಪೌರಾಯುಕ್ತರು, ಹಾಲಿ ಸಿಬ್ಬಂದಿ ಸೇರಿ ಒಟ್ಟು 10 ಜನರಿಗೆ ಆ.22ರಂದು ನೋಟಿಸ್ ಜಾರಿಗೊಳಿಸಲಾಗಿತ್ತು. ಪತ್ರದಲ್ಲಿ ಉಲ್ಲೇಖಿಸಿರುವಂತೆ ಎಲ್ಲ 49 ದಾಖಲೆಗಳನ್ನು ನಮ್ಮ ಸಿಬ್ಬಂದಿ ಹುಡುಕಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಹೇಳಿದರು.

ಆರೋಪಿ ಸ್ಥಾನದಲ್ಲಿರುವ ಸಿಬ್ಬಂದಿ ನೀಡಿರುವ ಹೇಳಿಕೆ ಸತ್ಯವೆಂದು ಹೇಗೆ ಒಪ್ಪಿಕೊಳ್ಳಿವಿರಿ? ಎಲ್ಲ ದಾಖಲೆಗಳನ್ನು ತೋರಿಸಿದರೆ ಸುದ್ದಿಗೆ ಅನುಕೂಲವಾಗುತ್ತಿತ್ತು ಎಂಬ ಸುದ್ದಿಗಾರರ ಮಾತಿನಿಂದ ಪೌರಾಯುಕ್ತರು ಪೆಚ್ಚಾದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ್, ಪೌರಾಯುಕ್ತರು ಪರಸ್ಪರ ಮುಖನೋಡಿಕೊಂಡು ಸೋಮವಾರ ದಾಖಲೆಗಳನ್ನು ತೋರಿಸುತ್ತೇವೆ ಎಂದು ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

ಇದೇ ವಿಚಾರವಾಗಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯೂ ಕೊನೇ ಗಳಿಗೆಯಲ್ಲಿ ಶುಕ್ರವಾರಕ್ಕೆ ಮುಂದೂಡಲಾಗಿತ್ತು ಆದರೆ, ನಗರಸಭೆ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಸಮಪರ್ಕ ಉತ್ತರ ನೀಡಲಿಲ್ಲ. ನಗರಸಭೆಯ ಈ ನಡುವಳಿಕೆಯಿಂದ ಸಾರ್ವಜನಿಕರ ಅನುಮಾನ ಮತ್ತಷ್ಟು ಗಟ್ಟಿಯಾಗುವಂತಾಗಿದೆ. ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಎ.ಲತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net