

ಹೊಸಪೇಟೆ: ದೇಶದಲ್ಲಿ ಶಾಂತಿ ನೆಮ್ಮದಿ ಇದ್ದರೆ ಅದು ಪೊಲೀಸರಿಂದ ಮಾತ್ರ ಸಾಧ್ಯ ಮತ್ತು ಪೊಲೀಸರ ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವದ ಸಂಕೇತವಾಗಿದ್ದರೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.
ಪೊಲೀಸ್ ಧ್ವಜ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ಬುಧವಾರ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು.
ಪೊಲೀಸ್ ಧ್ವಜ ವಿತರಣೆಯಿಂದ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಪೊಲೀಸ್ ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿಯವರ ಸೇವೆ, ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ದಿನವಾಗಿದೆ ಎಂದರು.
ಕಳೆದ ಸಾಲಿನ ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 5.56 ಲಕ್ಷ ರೂ. ಧನ ಸಹಾಯ ಮಾಡಲಾಗಿದೆ. ಪೊಲೀಸ್ ಕಲ್ಯಾಣ ನಿಧಿಯಲ್ಲಿ 33.50 ಲಕ್ಷ ರೂ.ಗಳಷ್ಟು ಹಣ ಕಲ್ಯಾಣ ನಿಧಿಯಲ್ಲಿ ಲಭ್ಯವಿದೆ. ಇಲ್ಲಿಯವರೆಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ 35 ಜನ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಅವರ ಕುಟುಂಬದವರು ಚಿಕಿತ್ಸೆ ಪಡೆದಿದ್ದಾರೆ. ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಿಂದ 25 ಜನ ವಿವಿಧ ದರ್ಜೆಯ ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ 2.59 ಸಾವಿರ ರೂಗಳಷ್ಟು ಸಹಾಯಧನ ನೀಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಯಲ್ಲಿ 24.86 ಲಕ್ಷ ರೂ. ಲಭ್ಯವಿದೆ ಎಂದರು.
ಪ್ರಧಾನ ಕಚೇರಿಯಿಂದ ಹಂಚಿಕೆಯಾದ ಧ್ವಜಗಳನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನೀಡಲಾಗಿದ್ದು, ಪೊಲೀಸ್ ಧ್ವಜ ಮಾರಾಟದಿಂದ 24.48 ಲಕ್ಷ ರೂ. ನಿಧಿ ಸಂಗ್ರಹಿಸಿದ್ದು, ಶೇ.50 ರಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಕಲ್ಯಾಣ ನಿಧಿಗೆ ಜಮ ಆಗಲಿದೆ. ಇನ್ನೂ ಶೇ.50 ರಷ್ಟು 12.24 ಲಕ್ಷ ರೂ. ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿರುತ್ತದೆ. ವ್ಶೆದ್ಯಕೀಯ ಸಹಾಯ ಮಾಡಲು ಅನುಕೂಲವಾಗಿದೆ ಎಂದರು.