

ಲಕ್ಕೂರು: ಯುಗಾದಿ ಹಬ್ಬದ ಮಾರನೆ ದಿನ ಸೋಮವಾರ ಆಗಿದ್ದರಿಂದ ಎಲ್ಲರೂ ಮಂಗಳವಾರ ಹಬ್ಬ ಆಚರಿಸಿದರು. ಹಸ್ತೊಡಕು ಆಚರಿಸುವ ಹಿನ್ನೆಲೆಯಲ್ಲಿ ಚಿಕ್ಕತಿರುಪತಿ ಗ್ರಾಮದ ಶನಿವಾರ ಸಂತೆಯಲ್ಲಿ ಕುರಿ, ಮೇಕೆ ಹಾಗೂ ಕೋಳಿಗಳ ಕೊಳ್ಳುವಿಕೆ ಹಾಗೂ ಮಾರಾಟದ ವ್ಯಾಪಾರ ಜೋರಾಗಿ ನಡೆಯಿತು.
ಸಂತೆಯಲ್ಲಿ ಮುಂಜಾನೆ ವಿವಿಧ ತಳಿಗಳ ಸುಮಾರು 5 ಸಾವಿರ ಕುರಿಗಳು ಸೇರಿದ್ದವು, ದೂರದ ರಾಮನಗರ ಆನೇಕಲ್, ದೇವನಹಳ್ಳಿ, ತುಮಕೂರು, ಬಂಗಾರಪೇಟೆ, ತಮಿಳುನಾಡಿನ ಹೊಸೂರು, ಸೇಲಂ, ಕೃಷ್ಣಗಿರಿ, ಚಿತ್ತೂರು, ಮದನಪಲ್ಲಿ, ಕಡಪ ಮುಂತಾದ ಕಡೆಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಕುರಿಗಳನ್ನು ಕೊಂಡು ವಾಹನಗಳಲ್ಲಿ ತುಂಬುಕೊಂಡು ಹೋದರು.
ಬನ್ನೂರು ಕುರಿ, ಆಂಧ್ರಪ್ರದೇಶದ ಕುರಿಗಳು ಹಾಗೂ ಮೇಕೆಗಳ ಬೆಲೆ ಸುಮಾರು ಮಾರುಕಟ್ಟೆಯಲ್ಲಿ ಕುರಿ ಹಾಗೂ ಕೋಳಿ ಮಾಂಸದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದರೂ ಸಹ ಮಾಂಸಹಾರಿಗಳು ಹೆಚ್ಚಿನ ಹಣ ನೀಡಿ ಮಾಂಸ ಖರೀದಿಸಿದರು. ಸಂತೆಯ ಹಲವು ಭಾಗಗಳಲ್ಲಿ ಹಿರಿಯ ವ್ಯಾಪಾರಿಗಳು ಕೈಮೇಲೆ ಬಟ್ಟೆಯನ್ನು ಹಾಕಿ ಬೆರಳುಗಳ ಮೂಲಕ ವ್ಯಾಪಾರ ಕುದುರಿಸುವ ಹಳೆಯ ಪದ್ಧತಿಯಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಇನ್ನು ಹಲವರು ಜೋರಾಗಿ ಕೂಗುವ ಮೂಲಕ ಬೆಲೆ ಕಟ್ಟಿ ಮಾರಾಟ ಮಾಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಂತೆಯಲ್ಲಿ ಚಿಕ್ಕ ಕುರಿಗಳು 6 ಸಾವಿರ ರೂ. ನಿಂದ ದೊಡ್ಡ ಕುರಿಗಳು 60 ಸಾವಿರ ರೂ.ಗಳ ವರೆಗೂ ಮಾರಾಟವಾದವು. ಮೇಕೆಗಳೂ ಸಹ 20 ಸಾವಿರದಿಂದ 50 ಸಾವಿರದವರೆಗೂ ಮಾರಾಟವಾಗಿ ದಾಖಲೆ ಕಂಡವು. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಮುಗಿಬಿದ್ದು ಕುರಿಗಳನ್ನು ಖರೀದಿಸಿದರು, ಸ್ಥಳಿಯ ಕುರಿ ಹಾಗೂ ನಾಟಿ ಕೋಳಿ ಸಾಕಾಣಿಕೆ ಮಾಡಿದ್ದ ರೈತರಿಗೆ, ಸಾಕು ಪ್ರಾಣಿಗಳ ಬೆಲೆ ಹೆಚ್ಚಾಗಿರುವುದರಿಂದ ಸಂತಸವಾಗಿತ್ತು. ಕುರಿ
ಕೋಳಿಗಳನ್ನು ಪಡೆದ ಗ್ರಾಹಕರು ಅವುಗಳನ್ನು ವಾಹನಗಳ ಮೂಲಕ ಸಾಗಿಸುವ ದೃಶ್ಯ ಸಾಮಾನ್ಯವಾಗಿತ್ತು.