

ಹೊಸನಗರ: ಮೂಡುಗೊಪ್ಪ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸಂಗೀತಾ ಯು. ಹಿಲ್ಕುಂಜಿ, ಉಪಾಧ್ಯಕ್ಷರಾಗಿ ಸುಮನಾ ಭಾಸ್ಕರ್ ನೂಲಿಗ್ಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
12 ಸದಸ್ಯ ಬಲದ ಗ್ರಾಪಂಯಲ್ಲಿ ಕಾಂಗ್ರೆಸ್ ಬೆಂಬಲಿತ 8, ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರಿದ್ದಾರೆ. ಚುನಾವಣಾಧಿಕಾರಿಯಾಗಿ ಬಿಸಿಎಂ ಕಲ್ಯಾಣಾಧಿಕಾರಿ ರಾಘವೇಂದ್ರ ಕಾರ್ಯನಿರ್ವಹಿಸಿದರು. ಮೂವರು ಸದಸ್ಯರು ಗೈರಾಗಿದ್ದರು.
ಬಳಿಕ ಮಾತನಾಡಿದ ಸಂಗೀತಾ, ಸುಮನಾ, ಮುಂದಿನ ಅವಧಿಯಲ್ಲಿ ಯಾವುದೇ ತಾರತಮ್ಯ ಎಸಗದೆ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ನಿರ್ಗಮಿತ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರನ್ನು ಸದಸ್ಯರು ಸನ್ಮಾನಿಸಿದರು.
ಗ್ರಾಪಂ ಸದಸ್ಯರಾದ ಸುಮತಿ ದಾಸ್, ಪವನಕುಮಾರ್, ನಿರ್ಮಲಾ, ಎಂ.ವಿಶ್ವನಾಥ, ಅರುಣ ಬೈಸೆ, ಪ್ರಮುಖರಾದ ಹಿಲ್ಕುಂಜಿ ಕುಮಾರ್, ದೇವಗಂಗೆ ಚಂದ್ರಶೇಖರ ಶೆಟ್ಟಿ, ಹಾಲಪ್ಪ ಗೌಡ, ಹಿದಾಯತ್, ಗೋಪಾಲ ಶೆಟ್ಟಿ, ಮಹೇಶ ಗೌಡ, ಸಂತೋಷ್, ವಿಜೇಂದ್ರ, ಗ್ರಾಪಂ ಪಿಡಿಒ ರಾಮಚಂದ್ರ ಇತರರಿದ್ದರು.
ಜಯಪ್ರಕಾಶ್‌ಗೆ ಪಟ್ಟ: ಯಡೂರು ಗ್ರಾಪಂ ಅಧ್ಯಕ್ಷರಾಗಿ ಜಯಪ್ರಕಾಶ್ ಯಡೂರು, ಉಪಾಧ್ಯಕ್ಷರಾಗಿ ಮಂಜುಳಾ ಸೀತಾರಾಮ್ ಅವಿರೋಧವಾಗಿ ಆಯ್ಕೆಯಾದರು. 5 ಸದಸ್ಯ ಬಲದ ಯಡೂರು ಗ್ರಾಪಂಯಲ್ಲಿ ಕಾಂಗ್ರೆಸ್ ಬೆಂಬಲಿತ 3, ಬಿಜೆಪಿ ಬೆಂಬಲಿತ 2 ಸದಸ್ಯರಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಓರ್ವ ಸದಸ್ಯರು ಗೈರಾಗಿದ್ದು ಚುನಾವಣಾಧಿಕಾರಿಯಾಗಿ ಹುಂಚ ಕೃಷಿ ಅಧಿಕಾರಿ ಮಾರುತಿ ಕಾರ್ಯನಿರ್ವಹಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ನೂತನ-ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿದರು.