ಈದು- ಹೊಸ್ಮಾರ್‌ನಲ್ಲಿ ಮನೆಗೆ ನುಗ್ಗಿ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

theft new
Published on

ಕಾರ್ಕಳ: ಈದು- ಹೊಸ್ಮಾರ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿಕ್ಷಕ ಗಣಪತಿ ಶಂಭು ನಾಯ್ಕ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವುಗೈದಿದ್ದಾರೆ.
ಗಣಪತಿ ಶಂಭು ನಾಯ್ಕ ಜೂನ್ 23ರಂದು ಪತ್ನಿಯ ಮನೆ ಕುಮಟಕ್ಕೆ ಸಂಸಾರ ಸಮೇತ ಹೋಗಿದ್ದು, ಶುಕ್ರವಾರ ವಾಪಸಾದಾಗ ಮನೆಯ ಮುಂಬಾಗಿಲಿನ ಚಿಲಕ ಮುರಿದು ಚಿನ್ನಾಭರಣ ಕಳ್ಳವಾಗಿರುವುದು ಬೆಳಕಿಗೆ ಬಂದಿದೆ.

ಕಪಾಟಿನಲ್ಲಿದ್ದ 40 ಗ್ರಾಂ ತೂಕದ ಕರಿಮಣಿ ಸರ-1, 20 ಗ್ರಾಂ ತೂಕದ 2 ಬಳೆಗಳು, 10 ಗ್ರಾಂ ತೂಕದ ಚಿನ್ನದ ಸರ -1 ಹಾಗೂ 5 ಗ್ರಾಂ ತೂಕದ ಕಿವಿಯೋಲೆ ಒಂದು ಜತೆ ಚಿನ್ನಾಭರಣ ಕಳ್ಳರ ಪಾಲಾಗಿವೆ. ಒಟ್ಟು ಮೌಲ್ಯ ಸುಮಾರು 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳದ ಅನತಿ ದೂರದಲ್ಲಿ ಗೂಡಂಗಡಿಯೊಂದಿದೆ. ಪೊಲೀಸ್ ಶ್ವಾನ ದಳವು ಘಟನಾ ಸ್ಥಳದಿಂದ ಮುಂದೆ ಓಡುತ್ತಾ ಗೂಡಂಗಡಿಯತ್ತ ಸಾಗಿದೆ. ಕಳ್ಳರು ಕೃತ್ಯ ಎಸಗಿ ಅದೇ ಗೂಡಂಗಡಿಯತ್ತ ಸಾಗಿರುವ ಸಾಧ್ಯತೆಯಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net