

ಮಂಜುನಾಥ ಎಸ್.ಸಿ. ಹೊಸಕೋಟೆ
ನಗರದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಆವರಣ ಹಳೇ ಮರಗಳು ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕವಾಗಿವೆ.
ಗಗನಚುಂಬಿಸುವಂತೆ ಬೆಳೆದಿರುವ 50 ವರ್ಷಕ್ಕೂ ಹಳೆಯ ಕೆಲವು ಮರಗಳು ಧರೆಗುರುಳುವ ಸ್ಥಿತಿಯಲ್ಲಿದ್ದು, ಯಾವಾಗ ಬೇಕಾದರೂ ಬೀಳುವ ಅಪಾಯವಿದೆ. ಕಳೆದೊಂದು ತಿಂಗಳಲ್ಲೇ ಮಳೆಗಾಳಿಗೆ 8ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕಾಲೇಜಿನ ದ್ವಿಚಕ್ರವಾಹನ ನಿಲುಗಡೆ ಶೆಡ್ ಹಾಗೂ ತಡೆಗೋಡೆಗೆ ಹಾನಿಯಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಪ್ರಾಣಹಾನಿ ಸಂಭವಿಸುವ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಇಂಥ ಮರಗಳನ್ನು ತೆರವುಗೊಳಿಸಲು ಕಾಲೇಜು ಪ್ರಾಂಶುಪಾಲರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಇತ್ತ ಗಮನ ನೀಡಿಲ್ಲ ಎನ್ನಲಾಗಿದೆ.
ಮನೆಗಳಿಗೂ ಆಪತ್ತು: ಇದೇ ಕಾಲೇಜು ಪಕ್ಕದ ಕುವೆಂಪು ನಗರದ ಬಡಾವಣೆ ನಿವಾಸಿಗಳಿಗೂ ಆಪತ್ತು ಎದುರಾಗಿದೆ. ಹಳೇ ಮರಗಳ ಕೊಂಬೆಗಳು ಗಾಳಿ ಮಳೆಗೆ ಮುರಿದು ವಿದ್ಯುತ್ ತಂತಿ ಹಾಗೂ ಮನೆಗಳ ಮೇಲೆ ಬೀಳುತ್ತಿರುವುದರಿಂದ ನಿವಾಸಿಗಳು ಆತಂಕಗೊಂಡಿದ್ದಾರೆ. ಹಲವು ಬಾರಿ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದು ಶಾರ್ಟ್‌ಸಕ್ಯೂರ್ಟ್ ಆದ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳೀಯರೂ ಈ ಬಗ್ಗೆ ಅರಣ್ಯ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರೂ ಇದುವರೆಗೆ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಳೆಯ ಮರಗಳು ಧರೆಗುರುಳುತ್ತಿರುವ ಬಗ್ಗೆ ದೂರು ಬಂದಿವೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ, ಟೆಂಡರ್ ಪ್ರಕ್ರಿಯೆ ಶುರು ಮಾಡಬೇಕಿದ್ದು ಅದಾದ ನಂತರ ಮರಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.
| ಪುಷ್ಪಲತಾ ವಲಯ ಅರಣ್ಯಾಧಿಕಾರಿ
ಕುವೆಂಪು ನಗರದ ನಿವಾಸಿಗಳು ಅನೇಕ ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಮರಗಳು ಧರೆಗುರುಳಿ ಪ್ರಾಣಾಪಾಯ ಸಂಭವಿಸಿದ ಬಳಿಕ ಬರುವ ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ.
| ಗುರುರಾಜ್ ಕುವೆಂಪು ನಗರದ ನಿವಾಸಿ
ಹಳೇ ಮರಗಳು ಯಾವಾಗ ಬೇಕಾದರೂ ಬೀಳುವ ಆತಂಕವಿದೆ. ಮರಗಳು ಮನೆ ಮೇಲೆ ಬಿದ್ದರೆ ದೊಡ್ಡ ಅನಾಹುತವೇ ಸಂಭವಿಸಲಿದೆ. ಹಲವು ಬಾರಿ ಕಾಲೇಜಿನ ಬೈಕ್ ಸ್ಟ್ಯಾಂಡ್ ಮೇಲೆ ಮರಗಳು ಬಿದ್ದಿವೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಅಧಿಕಾರಿಗಳು ಈಗಲಾದರೂ ಕ್ರಮಕ್ಕೆ ಮುಂದಾಗಬೇಕು.
| ಲಕ್ಷ್ಮಿ ನಾರಾಯಣ ರಾಜು ಕುವೆಂಪು ನಗರ ನಿವಾಸಿ