

ಹೊಸಕೋಟೆ: ಮೂರು ದಶಕಗಳ ನಂತರ ಕೋಡಿ ಹರಿದ ಹೊಸಕೋಟೆಯ ದೊಡ್ಡ ಅಮಾನಿಕೆರೆಯ ನೀರಿನಲ್ಲಿ ಹೊಸಕೋಟೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾನುವಾರ ಆಟವಾಡಿ ಸಂತಸಪಟ್ಟರು.
ಸುಮಾರು 886 ಎಕ್ಟೆರ್ ವಿಸ್ತೀರ್ಣ ಹೊಂದಿರುವ ಅಮಾನಿಕೆರೆ ದಕ್ಷಿಣ ಪಿನಾಕಿನಿ ನದಿ ಎಂಬ ಖ್ಯಾತಿ ಹೊಂದಿದೆ. ನಂದಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಎರಡು ನದಿಗಳಲ್ಲಿ ದಕ್ಷಿಣ ಪಿನಾಕಿನಿ ನದಿಯೂ ಒಂದಾಗಿದೆ. ದಕ್ಷಿಣ ಪಿನಾಕಿನಿ ನದಿ ದೇವನಹಳ್ಳಿ ವಿಜಯಪುರ ಕೆರೆಗಳ ಮೂಲಕ ಹರಿದು ಹೊಸಕೋಟೆಯ ಕೆರೆ ಸೇರಿ ನಂತರ ಅನುಗೊಂಡನಹಳ್ಳಿ ಮೂಲಕ ತಮಿಳುನಾಡಿಗೆ ಹರಿಯುತ್ತದೆ.
ನಂದಿ ಬೆಟ್ಟದ ತಪ್ಪಲಲ್ಲಿ ಹುಟ್ಟುವ ಈ ನದಿ ಸುತ್ತ ಮುತ್ತಲ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಿನ ಆಸರೆಯಾಗಿದೆ.
1991ರಲ್ಲಿ ತುಂಬಿ ಕೋಡಿ ಹರಿದಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾಗಿದ್ದ ಚಿಕ್ಕೇಗೌಡ, ಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕೆರೆಗೆ ಬಾಗಿನ ಅರ್ಪಿಸಿದ್ದರು. ಆ ಸಂದರ್ಭದಲ್ಲಿ ಅದ್ದೂರಿಯಾಗಿ ತೆಪ್ಪೊತ್ಸವ ಮಾಡಲಾಗಿತ್ತು. ನಂತರ ಕ್ಷೇತ್ರದ ಶಾಸಕರಾಗಿ ಮಂತ್ರಿಯಾಗಿದ್ದ ಬಿ.ಎನ್.ಬಚ್ಚೇಗೌಡ, ದೇವೇಗೌಡ ಅವರನ್ನು ಕರೆಸಿ ದೊಡ್ಡ ಅಮಾನಿ ಕೆರೆಗೆ ಬಾಗಿನ ಸಮರ್ಪಿಸಿ ಗಂಗಮ್ಮ ದೇವಿಯ ದೀಪೋತ್ಸವವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಈಗ 30 ವರ್ಷದ ನಂತರ ಮತ್ತೆ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಇತ್ತೀಚೆಗೆ ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ಬಚ್ಚೇಗೌಡ, ಹಾಗೂ ಸಂಸದ ಬಿ.ಎನ್.ಬಚ್ಚೇಗೌಡ ದಕ್ಷಿಣ ಪಿನಾಕಿನಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದ್ದರು.
ಈ ಭಾಗವನ್ನು ಅಭಿವೃದ್ಧಿಪಡಿಸಿದರೆ ಇದಕ್ಕಿಂತ ಸುಂದರ ಪ್ರವಾಸಿ ತಾಣ ಮತ್ತೊಂದಿರದು. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಈ ಕೆರೆ ಭಾಗದ ಜಾಗವನ್ನು ಪ್ರವಾಸಿ ತಾಣವಾಗಿಸಬೇಕು.
| ಎಸ್.ಎನ್.ಚಂದ್ರಶೇಖರಯ್ಯ ಹೊಸಕೋಟೆ ನಿವಾಸಿ