ಭವಿಷ್ಯದ ದೃಷ್ಟಿಯಲ್ಲಿ ಯೋಜನೆಗಳು ರೂಪುಗೊಳ್ಳಬೇಕು: ಸಚಿವ ಎಂಟಿಬಿ ಅಭಿಮತ

1
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿಯ ದುನ್ನಸಂದ್ರ ಕ್ರಾಸ್​ನಲ್ಲಿ ವಿದ್ಯುತ್​ ನಿರಂತರ ಸರಬರಾಜು ಯೋಜನೆಗೆ ಸಚಿವ ಎಂಟಿಬಿ ನಾಗರಾಜ್​ ಶನಿವಾರ ಚಾಲನೆ ನೀಡಿದರು. ಬಿಎಂಆರ್​ಡಿಎ ಅಧ್ಯ ಶಂಕರೇಗೌಡ ಮುಖಂಡರಾದ ಚನ್ನಸಂದ್ರ ನಾಗರಾಜ್​, ದುನ್ನಸಂದ್ರ ಲ್ಮಣಗೌಡ, ನಾರಾಯಣಸ್ವಾಮಿ, ಮುನಿರಾಜು, ಮಮತಾ ಶ್ರೀನಾಥ ಬೆಸ್ಕಾಂ ಇಂಜಿನಿಯರ್​ ಅಶೋಕ್​ ಮತ್ತಿತರರಿದ್ದರು.
Published on

ಬೆಂಗಳೂರು ಗ್ರಾಮಾಂತರ: ಯಾವುದೇ ಯೋಜನೆಗಳನ್ನು ರೂಪಿಸಬೇಕಾದರೆ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್​ ಹೇಳಿದರು.

ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ವಿದ್ಯುತ್​ ನಿರಂತರ ಸರಬರಾಜು ಯೋಜನೆಗೆ ಶನಿವಾರ ದುನ್ನಸಂದ್ರ ಕ್ರಾಸ್​ನಲ್ಲಿ ಚಾಲನೆ ನೀಡಿ ಮಾತನಾಡಿದರು. ಯೋಜನೆಗಳನ್ನು ರೂಪಿಸುವ ಮುನ್ನ ಭವಿಷ್ಯದಲ್ಲಿ ಆ ಭಾಗದಲ್ಲಿ ಹೆಚ್ಚಬಹುದಾದ ಜನಸಂಖ್ಯೆ, ಕೈಗಾರಿಕೆಗಳು, ವ್ಯಾಪಾರ ವಹಿವಾಟು ಸೇರಿ ಒಟ್ಟಾರೆ ಪ್ರದೇಶದ ಪರಿಸ್ಥಿತಿ ಅವಲೋಕಿಸಬೇಕು, ಆಗ ಮಾತ್ರ ಯೋಜನೆಗಳು ಮುಂದಿನ ದಿನಗಳಲ್ಲೂ ಪೂರಕವಾಗಿರುತ್ತವೆ ಎಂದರು.


ವಿದ್ಯುತ್​ ಸಮಸ್ಯೆಗೆ ಪರಿಹಾರ: ಅನುಗೊಂಡನಹಳ್ಳಿ ಹೋಬಳಿ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ವಿದ್ಯುತ್​ ಪೂರೈಕೆ ಕಗ್ಗಾಂಟಾಗಿತ್ತು, ಪ್ರತಿನಿತ್ಯ ಗ್ರಾಮಸ್ಥರು ಸಮರ್ಪಕ ವಿದ್ಯುತ್​ ಪೂರೈಕೆಗೆ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ 2020ರಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದಕ್ಕೆ ಸರ್ಕಾರ ಸಮ್ಮತಿಸಿದ್ದು, ಈ ಹಿಂದೆ ಇದ್ದ 12 ಮೆಗಾವಾಟ್​ಗೆ ಬದಲಿಗೆ ಹೆಚ್ಚುವರಿಯಾಗಿ 10 ಮೆಗಾವಾಟ್​ ವಿದ್ಯುತ್​ ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ಹೂಡಿ, ಆನೇಕಲ್​, ಹೊಸೂರು ಮತ್ತಿತರ ಕಡೆಗಳಿಂದ ವಿದ್ಯುತ್​ ಪಡೆಯಬೇಕಿತ್ತು, ಆದರೆ ವಿದ್ಯುತ್​ ಕೊರತೆಯಿಂದಾಗಿ ಗ್ರಾಮಗಳು ಕತ್ತಲಿನಲ್ಲಿ ಮುಳುಗುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.


ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ಹೊಸಕೋಟೆ ವೇಗವಾಗಿ ಬೆಳೆಯುತ್ತಿದೆ, ಈ ಭಾಗದಲ್ಲಿ ಬೃಹತ್​ ಕೈಗಾರಿಕೆಗಳು ತಲೆಎತ್ತುತ್ತಿವೆ, ಶಿಕ್ಷಣ ಸಂಸ್ಥೆಗಳು, ವೇರ್​ಹೌಸ್​ ಮತ್ತಿತರ ದೊಡ್ಡಮಟ್ಟದ ಅಭಿವೃದ್ಧಿ ಕಾಣುತ್ತಿರುವುದರಿಂದ ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.


ಡಿಸಿಗೆ ಸೂಚನೆ: ಈ ಹಿಂದೆಯೇ ಗಣಗಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಪವರ್​ಸ್ಟೇಷನ್​ ಸ್ಥಾಪನೆಗೆ 2 ಎಕರೆ ಭೂಮಿ ಹುಡುಕಾಟ ನಡೆದಿತ್ತು. ರೈತರ ಅಸಹಕಾರ ಹಾಗೂ ಮತ್ತಿತರ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತ್ತು. ಈಗ 2 ಎಕರೆ ಭೂಮಿ ಗುರುತಿಸಲಾಗಿದ್ದು, ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net