ನರೇಗಾ ಸಾಧನೆಯಲ್ಲಿ ಹೊಸಕೋಟೆ ಪ್ರಥಮ, ತಾಪಂ ಇಒ ಶ್ರೀನಾಥ್ ಗೌಡ ಮಾಹಿತಿ, ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣ ಕಾಮಗಾರಿ ಪರಿಶೀಲನೆ

12 Nandagudi 4 basketball
Published on

ನಂದಗುಡಿ: ಕೊಂಡ್ರಹಳ್ಳಿ ಶ್ರೀ ಧರ್ಮೇಶ್ವರದ ಸರ್ಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ನರೇಗಾ ಯೋಜನೆಯಲ್ಲಿ ಅಂದಾಜು 9 ಲಕ್ಷ ರೂ. ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಕೋರ್ಟ್ ಅಭಿವೃದ್ಧಿಗೆ ಮುಂದಾಗಲಾಗಿದೆ ಎಂದು ತಾಪಂ ಇಒ ಶ್ರೀನಾಥ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆ ಆವರಣದಲ್ಲಿ ನಿರ್ಮಿಸಿರುತ್ತಿರುವ ಬಾಸ್ಕೆಟ್ ಬಾಲ್ ಕೋರ್ಟ್‌ನ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.

ನರೇಗಾ ಯೋಜನೆಯಲ್ಲಿ ತಾಲೂಕಿನ 28 ಗ್ರಾಪಂಗಳು ಪ್ರಸಕ್ತ ಸಾಲಿನ 8 ತಿಂಗಳಲ್ಲೆ ಶೇ.80 ಗುರಿ ತಲುಪಿ, ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿವೆ. ಈ ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದೇಶದ ಮೇರೆಗೆ ಕೋವಿಡ್-19 ಸಂಕಷ್ಟದಲ್ಲಿ ಕೂಲಿಕಾರರಿಗೆ ಅನುಕೂಲವಾಗಲಿ ಎಂದು ಈ ಹಿಂದಿನ ಕಾಮಗಾರಿಗಳ ಜತೆಗೆ ಬದು ನಿರ್ಮಾಣ, ಇಂಗುಗುಂಡಿ, ಕೃಷಿ ಹೊಂಡ, ಮಳೆನೀರು ಕೂಯ್ಲು ಸೇರಿ ವಿವಿಧ ಕಾಮಗಾರಿಗಳನ್ನ ಕೈಗೆತ್ತುಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಕಾರ್ಯದ ಯಶಸ್ಸು ಗ್ರಾಪಂ ಜೆಇ ವಿನಯಶ್ರೀ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುತ್ತಿಗೆದಾರ ಮಂಜುನಾಥ್, ಶಾಲಾ ಸಿಬ್ಬಂದಿ ಸುಕನ್ಯಾ ನಾಯಕ್, ಸಂತೋಷಮ್ಮ, ಕೃತಿ, ಬಸವರಾಜ್ ಬೆಟಗೇರಿ, ಮಂಜಮ್ಮ ಕಾಳಗಿ, ಕರ ವಸೂಲಿಗಾರ ರಾಘವೇಂದ್ರ ಮತ್ತಿತರರಿದ್ದರು.

ಶಿವನಾಪುರದಲ್ಲಿ ಕೆರೆ ಅಭಿವೃದ್ಧಿ: ನಂದಗುಡಿ ಹೋಬಳಿಯ ಶಿವನಾಪುರ ಗ್ರಾಪಂನ ಮಲಿಯಪ್ಪನಹಳ್ಳಿಯ ಕುಂಟೆಯಲ್ಲಿ 20 ಅಡಿ ಆಳದವರೆಗೆ ಹೂಳು ತೆಗೆಸಲಾಗಿದೆ. 200 ಮೀಟರ್ ಸುತ್ತಳತೆಯಲ್ಲಿ ನಾಲ್ಕು ಕಡೆ ಕಲ್ಲುಗಳಿಂದ ಭದ್ರಪಡಿಸಿ, ಮಳೆಯಾದಾಗ ಸರಾಗವಾಗಿ ನೀರು ಹರಿಯುವಂತೆ ಕಾಲುವೆ ನಿರ್ಮಿಸಲಾಗಿದೆ. ಇದರಿಂದ ನೀರು ಶೇಖರಣೆಯಾಗಿ, ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ. ಈ ಮೂಲಕ ಇಡೀ ಜಿಲ್ಲೆಯಲ್ಲೆ ನರೇಗಾ ಕಾಮಗಾರಿ ಕೈಗೆತ್ತುಕೊಂಡ ಗ್ರಾಪಂಗಳಲ್ಲಿ ಮೊದಲ ಸ್ಥಾನ ಗಳಿಸಿ ಅತ್ಯುತ್ತಮ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಇಒ ಶ್ರೀನಾಥ್ ಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net