

ಪಾಂಡವಪುರ: ತಾಲೂಕಿನ ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೈತ ಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ಎಚ್.ಪಿ.ಸುರೇಶ್(ನರಸಿಂಹೇಗೌಡ) ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಎಚ್.ಆರ್.ನಾರಾಯಣಗೌಡ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು 12 ನಿರ್ದೇಶಕ ಬಲದ ಡೇರಿಯಲ್ಲಿ ಅಧ್ಯಕ್ಷಗಾದಿ ಬಯಸಿ ಎಚ್.ಪಿ.ಸುರೇಶ್ ಹೊರತುಪಡಿಸಿ ಯಾರೊಬ್ಬರು ನಾಮಪತ್ರ ಸಲ್ಲಿಸಲಿಲ್ಲ. ಪರಿಣಾಮ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಕೆ.ಹೇಮಲತಾ ಅವಿರೋಧ ಅಯ್ಕೆ ಘೋಷಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ ಮತ್ತು ಸಂಘದ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಹೊಸಕೋಟೆ ಡೇರಿಯನ್ನು ತಾಲೂಕಿನಲ್ಲಿಯೇ ಮಾದರಿ ಡೇರಿಯನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಯಾವುದೇ ಒಂದು ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ಸಂಘದ ಆಟಳಿತ ಮಂಡಳಿ ಮತ್ತು ಕಾರ್ಯದರ್ಶಿಗಳು ಒಗ್ಗೂಡಿ ಕೆಲಸ ಮಾಡಬೇಕು. ಹೊಸಕೋಟೆ ಡೇರಿ ಲಾಭದಾಯಕವಾಗಿ ನಡೆಯುತ್ತಿದ್ದು, ಮುಂದೆಯೂ ಇದೇ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಸೋಮಶೇಖರ್, ಜವರೇಗೌಡ, ಎಚ್.ಬಿ.ದೇವರಾಜು, ಎಚ್.ಸಿ.ರಾಜೇಗೌಡ, ಎಚ್.ಆರ್.ಆನಂದ್, ಎಚ್.ಎಸ್.ಹಾಳಯ್ಯ, ಪದ್ಮಮ್ಮ, ಪ್ರೇಮಕುಮಾರಿ, ರತ್ನಮ್ಮ ಗ್ರಾಮದ ಮುಖಂಡರಾದ ನರಸಿಂಹೇಗೌಡ, ಪುಟ್ಟೇಗೌಡ, ಹಳೇಬೀಡು ತಿಮ್ಮೇಗೌಡ, ಯಧುರಾಜು. ಕುಮಾರ್, ಖ್ಯಾತೇಗೌಡ, ಎಚ್.ಮಂಜುನಾಥ್, ಎಚ್.ಜಿ.ರಜಿನಿ, ಪರಮೇಶ್, ಚಂದ್ರಚಾರಿ ಇತರರು ಇದ್ದರು.