

ಹೊಸಪೇಟೆ : ಹಾಥರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಸಿಐಟಿಯು ಸೇರಿ ವಿವಿಧ ಸಂಘಟನೆಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆಗೈದಿದ್ದು ಅಮಾನುಷ ದುಷ್ಕೃತ್ಯವಾಗಿದೆ. ಆಕೆ ಬಡ ಕೃಷಿ ಕೂಲಿಕಾರ ಕುಟುಂಬಕ್ಕೆ ಸೇರಿದ್ದು, ನ್ಯಾಯ ಒದಗಿಸಬೇಕು. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಹಾಥರಾಸ್ ಅತ್ಯಾಚಾರ, ಕೊಲೆ ಪ್ರಕರಣ ತನಿಖೆಯಾಗಬೇಕು. ಕರ್ತವ್ಯ ಉಲ್ಲಂಘಿಸಿರುವ ಪೊಲೀಸ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಯುವತಿ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಉನ್ನಾವೊ, ಬಲರಾಮಪುರ ಪ್ರಕರಣ ಸೇರಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಬೇಕು. ತಳವರ್ಗಗಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದು ಇಡೀ ತಲೆತಗ್ಗಿಸುವಂತೆ ಮಾಡಿದೆ. ಬಿಜೆಪಿ ಸರ್ಕಾರ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಳಿಕ ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಲಾಯಿತು. ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ, ಪ್ರಾಂತ ರೈತ ಸಂಘ, ಸಿಐಟಿಯು ಸೇರಿ ವಿವಿಧ ಸಂಘಟನೆಗಳ ಮುಖಂಡರಾದ ಮರಡಿ ಜಂಬಯ್ಯ ನಾಯಕ, ಆರ್.ಭಾಸ್ಕರ್ ರೆಡ್ಡಿ, ಕೆ.ನಾಗರತ್ನ, ಬಸವರಾಜ್, ಬಿಸಾಟಿ ಮಹೇಶ, ಕಲ್ಯಾಣಯ್ಯ, ಯಲ್ಲಾಲಿಂಗ, ಕೆ.ಎಂ.ಸಂತೋಷ ಸೇರಿ ಇತರರು ಪಾಲ್ಗೊಂಡಿದ್ದರು.