ಹೊಸಬೂದನೂರು ಸರ್ಕಾರಿ ಶಾಲೆಯನ್ನು ಮಾದರಿಯನ್ನಾಗಿ ಪರಿವರ್ತಿಸಲು ಆದ್ಯತೆ: ಶಾಸಕ ರವಿಕುಮಾರ್ ಗಣಿಗ ಭರವಸೆ

Hosbudanur Govt School Anniversary mandya
Published on

ಮಂಡ್ಯ: ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತಾಗಬೇಕು. ಇದಕ್ಕೆ ಶಾಲೆಯ ಕೊಠಡಿಗಳೂ ಸಹ ಹೈಟೆಕ್ ಆಗಿ ನಿರ್ಮಾಣವಾಗಬೇಕು. ಆದ್ದರಿಂದ ದಾನಿಗಳು ಸರ್ಕಾರಿ ಶಾಲೆಗಳ ಉಳಿವಿಗಾಗಿ ಮುಂದೆ ಬರಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.

ತಾಲೂಕಿನ ಹೊಸಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಮೂರು ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರ ಅನುದಾನದಲ್ಲಿ ಎರಡು ನೂತನ ಕೊಠಡಿಗಳ ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಮಾತ್ರವಲ್ಲದೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಆದ್ಯತೆ ನೀಡಲಾಗುವುದು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್.ರಘು ಶಾಲೆಯ ನೂತನ ಕೊಠಡಿಗಳ ನಿರ್ಮಾಣಕ್ಕಾಗಿ ಹಲವು ದಾನಿಗಳಿಂದ ನೆರವು ಪಡೆದಿದ್ದಾರೆ. ಅವರಿಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಹೇಳಿದರು.

ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಬಂಡವಾಳಶಾಹಿಗಳು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್.ರಘು, ಗ್ರಾಮ ಪಂಚಾಯಿತಿ ಸದಸ್ಯರಾದ ಶಿಲ್ಪಾ, ಅರುಣ್(ಸಿದ್ದು) ಮಾಜಿ ಸದಸ್ಯರಾದ ಶಿವಲಿಂಗು, ರಾಮರಾಜು ಉಪಸ್ಥಿತರಿದ್ದರು.

ಇದೇ ವೇಳೆ ಶಾಲೆಯ ನೂತನ ಕೊಠಡಿಗಳ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳಾದ ವಿಜಯಮ್ಮ, ಆರ್‌ಎಪಿಸಿಎಂಎಸ್ ಉಪಾಧ್ಯಕ್ಷ ಜಿ.ಪಿ.ಮಹೇಶ್, ಕಾನ್‌ಕಾರ್ಡ್ ಚಂದ್ರು, ಸಿದ್ದೇಗೌಡರ ಪುತ್ರ ವಿದೀಪ್ ಹಾಗೂ ಚಿಕ್ಕಲಿಂಗು ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net