

ಹೊಸಪೇಟೆ: ಮೂರು ವರ್ಷಗಳ ಫೆಲೋಶಿಪ್ (ಸಹಾಯಧನ) ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ವಿವಿಯ ಎಸ್ಸಿ-ಎಸ್ಟಿ ಸಂಶೋಧನಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ಎಡಿಸಿ ಕೆ.ಮಹೇಶ್ ಬಾಬುಗೆ ಮನವಿ ಸಲ್ಲಿಸಿದರು.
ತಹಸಿಲ್ ಕಚೇರಿಯಿಂದ ಡಾ.ಅಂಬೇಡ್ಕರ್ ವೃತ್ತ, ವಿಜಯನಗರ ಕಾಲೇಜು ರಸ್ತೆ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ವಿವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಸ್ಸಿ, ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಸಹಾಯಧನ ಮತ್ತು ಸಾಧಿಲ್ವಾರು ಅನುದಾನವನ್ನು ಕನ್ನಡ ವಿಶ್ವವಿದ್ಯಾಲಯ 34 ತಿಂಗಳಿಂದ ಬಾಕಿ ಉಳಿಸಿಕೊಂಡಿದೆ.
ಪಿಎಚ್.ಡಿ ನಿಯಮಾವಳಿಯಂತೆ ಒಬ್ಬ ಸಂಶೋಧಕ ಪ್ರವೇಶ ಪಡೆದ ದಿನಾಂಕದಿಂದ ಪ್ರತಿ ತಿಂಗಳು ಮಾಸಿಕ ಸಹಾಯಧನ ನೀಡಬೇಕು ಎಂಬ ನಿಯಮವನ್ನು ಕಳೆದ ಎರಡು ವರ್ಷದಿಂದ ಕೈ ಬಿಡಲಾಗಿದೆ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಆರು ತಿಂಗಳಿಗೊಮ್ಮೆ ನಡೆಯುವ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿ ಸಲ್ಲಿಕೆ ಜತೆಗೆ ಅರ್ಧವಾರ್ಷಿಕ ಪ್ರಗತಿ ವರದಿ ಶುಲ್ಕವನ್ನು ಸಂದಾಯ ಮಾಡಿದ್ದೇವೆ. ಆದರೂ ಯಾವುದೇ ಫೆಲೋಶಿಪ್ ಇಲ್ಲದ ಕಾರಣ ಸಂಶೋಧನೆಗಳಿಂದ ಹೊರಗುಳಿಯುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
2018-19ನೇ ಸಾಲಿನ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದುವರೆಗೂ ಫೆಲೋಶಿಪ್ ನೀಡಿಲ್ಲ. ಕನ್ನಡ ವಿವಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ.ಯಂತೆ ಮೂರು ವರ್ಷದ ಸಹಾಯಧನ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.