ಹೊಸಪೇಟೆಯಲ್ಲಿ ತಾಲೂಕು ಮಟ್ಟದ ಪ್ರಪ್ರಥಮ ಲೇಖಕಿಯರ ಸಮಾವೇಶ

08032020 Hosapete Womens Day
Published on

ಹೊಸಪೇಟೆ: ಕುಟುಂಬ ನಿರ್ವಹಣೆ ಜತೆಗೆ ಪರುಷ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆ ತಾಳ್ಮೆಯ ಪ್ರತಿರೂಪ ಆಗಿದ್ದಾಳೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ್ ಹೇಳಿದರು.


ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಗರದ ಮಲ್ಲಿಗೆ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ.ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಪ್ರಥಮ ಲೇಖಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮನೆಯಲ್ಲಿ ಪತಿಯ ಸಿಟ್ಟಿನ ಮಾತುಗಳಿಗೆ ಮಹಿಳೆ ತಕ್ಷಣವೇ ಎದುರುತ್ತರ ನೀಡದೆ, ತಾಳ್ಮೆಯಿಂದ ಕೇಳಬೇಕು. ನಂತರ ಅವರಿಗೆ ತಿಳಿಹೇಳಿದರೆ ಅರ್ಥೈಸಿಕೊಳ್ಳುತ್ತಾರೆ. ಇದರಿಂದ ಕೂಡು ಕುಟುಂಬಗಳು ಉಳಿಯಲು ಸಾಧ್ಯ. ಸಣ್ಣಪುಟ್ಟ ವಿಚಾರಗಳಿಗೆ ಬೇರೆಯವರ ಮಾತು ಕೇಳಿ ಕೋರ್ಟ್ ಮೆಟ್ಟಲೇರುವುದು ಸರಿಯಲ್ಲ. ಇದರಿಂದ ಜೀವನದಲ್ಲಿ ನೆಮ್ಮದಿ ಕಳೆದಕೊಳ್ಳಬೇಕಾಗುತ್ತದೆ. ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಪಾಲಕರು ಹೆಣ್ಣುಮಕ್ಕಳ ಸ್ವಾವಲಂಬಿ ಜೀವನಕ್ಕೆ ಬೇಕಾದ ಶಿಕ್ಷಣ ಕೊಡಿಸಬೇಕು ಎಂದರು.

ಸಾನ್ನಿಧ್ಯವಹಿಸಿದ್ದ ಹಂಸಾಂಬಾಶ್ರಮದ ಮಾತಾಜಿ ಪ್ರಭೋದಮಯಿ ಮಾತನಾಡಿ, ಗಂಡು ಮತ್ತು ಹೆಣ್ಣಿನಲ್ಲಿ ಆತ್ಮಶಕ್ತಿ ಜಾಗೃತಿಗೊಳಿಸುವ ಇಚ್ಛಾಶಕ್ತಿ ಅಗತ್ಯವಿದೆ. ಮಾನಸಿಕ, ಜ್ಞಾನಮಟ್ಟ ಹೆಚ್ಚಿಸುವ, ಚಿಂತನೆಗಳ ಮತ್ತು ಭಾವನೆಗಳನ್ನು ಜಾಗೃತಿಗೊಳಿಸುವ ಸಾಹಿತ್ಯ ರಚನೆಯಾಗಬೇಕು ಎಂದರು. ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ಜಿಪಂ ಸದಸ್ಯೆ ಕೆ.ಜಯಕುಮಾರಿ ಈಶ್ವರ್ ಮಾತನಾಡಿದರು. ಕವಿಯತ್ರಿ ದಿ.ಟಿ.ಎಂ.ತಿಲೋತ್ತಮ ಅವರ ಕವನಗಳ ಮುಸ್ಸಂಜೆ ಮಾತು ಪುಸ್ತಕವನ್ನು ಸಾಹಿತಿ ಎಂ.ಎಂ.ಶಿವಪ್ರಕಾಶ ಬಿಡುಗಡೆಗೊಳಿಸಿದರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಡಿ.ಎನ್.ಸುಜಾತ, ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ, ಕಿರ್ಲೋಸ್ಕರ್ ಲೇಡಿಸ್ ಕ್ಲಬ್‌ನ ಶಿಲ್ಪಾ ಶ್ರೀವತ್ಸನ್, ಕಸಾಪ ತಾಲೂಕು ಅಧ್ಯಕ್ಷ ಡಾ.ಎತ್ನಳ್ಳಿ ಮಲ್ಲಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net