ಇಂಥದ್ದೇ ಖಾತೆ ಬೇಕು; ಸಿಎಂಗೆ ಸಚಿವ ಆನಂದಸಿಂಗ್ ಮನವಿ

Anand Singh 082021
ಆನಂದ ಸಿಂಗ್.
Published on

ಹೊಸಪೇಟೆ: ಈಗಾಗಲೇ ಹಲವು ಖಾತೆ ನಿಭಾಯಿಸಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಇಂಥದ್ದೇ ಖಾತೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿರುವೆ ಎಂದು ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಕೇಳಿದ ಖಾತೆ ನೀಡಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ. ಒಂದು ವೇಳೆ ದೊರೆಯದಿದ್ದರೆ ಯಾವುದೇ ಅಸಮಾಧಾನವಿಲ್ಲ. ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ ಎಂದು ತಿಳಿಸಿದರು.

ದಶಕಗಳಿಂದ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಎರಡೇ ಸ್ಥಾನದಿಂದ ಹಿಡಿದು ಇಂದು ರಾಜ್ಯದಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವ ಮಟ್ಟಕ್ಕೆ ಬೆಳೆಸಿದ್ದಾರೆ. ಅನಿವಾರ್ಯ ಕಾರಣಗಳಿಂದ ನಾಯಕತ್ವ ಬದಲಾವಣೆಯಾಗಿದೆ. ಅವರನ್ನು ಮಾಜಿ ಸಿಎಂ ಅಂತ ಕರೆಯಲು ನನ್ನ ಮನಸು ಒಪ್ಪುತ್ತಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಯಡಿಯೂರಪ್ಪ ಮಾರ್ಗದರ್ಶನ ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಬಿಎಸ್‌ವೈ ಕೈಗೊಂಬೆ ಅಂತ ಹೇಳೋಕಾಗಲ್ಲ. ಸಿಎಂ ಬದಲಾವಣೆಯಿಂದ ನೂತನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗುವುದಿಲ್ಲ. ಗಣೇಶ ಚತುರ್ಥಿ ವೇಳೆಗೆ ಜಿಲ್ಲೆ ಉದ್ಘಾಟಿಸುವ ಕುರಿತು ಚರ್ಚಿಸಲಾಗುವುದು. ಶೀಘ್ರವೇ ಡಿಸಿ, ಎಸ್ಪಿ, ಸಿಇಒ ಬರಲಿದ್ದಾರೆ.| ಆನಂದ ಸಿಂಗ್ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net