

ಪ್ರಭು ಹಂಪಾಪಟ್ಟಣ ಹೊಸಪೇಟೆ
ತಾಲೂಕಿನ ನಾಗೇನಹಳ್ಳಿ ಬಳಿಯ ಎಲ್‌ಎಲ್ ಕಾಲುವೆಗೆ ಸಿಮೆಂಟ್ ಗೋಡೆ ಇಲ್ಲದಿರುವುದರಿಂದ ಮಣ್ಣಿನ ಸವಕಳಿ ಹೆಚ್ಚಾಗಿದ್ದು, ಕಾಲುವೆ ಮೇಲಿನ ರಸ್ತೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿದೆ.
ಕಾಲುವೆಯು 200 ಮೀಟರ್‌ನಷ್ಟು ಸವಕಳಿಯಾಗಿದ್ದು, ರಸ್ತೆ ಬಿರುಕು ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕಾಲುವೆಯ ಪಕ್ಕದಲ್ಲಿನ ರಸ್ತೆಯ ಎರಡು ಭಾಗದಲ್ಲಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿದೆ. ಈಗ ಮಳೆಗಾಲ ಆರಂಭವಾಗಿದ್ದು, ಭಾರಿ ಮಳೆ ಬಂದರೆ ರಸ್ತೆ ಸಂಪೂರ್ಣವಾಗಿ ಕುಸಿಯಲಿದೆ. ರೈತರು ಎತ್ತಿನ ಬಂಡಿಗಳಲ್ಲಿ ಕಬ್ಬು ತುಂಬಿಕೊಂಡು ಇದೇ ರಸ್ತೆ ಮೂಲಕ ಗಾಣಗಳಿಗೆ ಸಾಗಿಸುತ್ತಾರೆ. ಈ ವೇಳೆ ಮಣ್ಣು ಕುಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ.
ದುರಸ್ತಿಗೆ ರೈತರ ಒತ್ತಾಯ: ಕಾಲುವೆ ಮೇಲಿನ ಮಾರ್ಗವಾಗಿ ಕಬ್ಬಿನ ಗಾಣಗಳಿಗೆ ರೈತರು ಎತ್ತಿನ ಬಂಡಿಗಳಲ್ಲಿ ತೆರಳುತ್ತಾರೆ. ತಾಲೂಕಿನ ಕೊಂಡನಾಯಕಹಳ್ಳಿ, ಅನಂತಶಯನಗುಡಿ, ಮಲಪನಗುಡಿ, ಬೆಣಕಾಪುರ ತಾಂಡಾ, ಕೊಂಡನಾಯಕಹಳ್ಳಿ ತಾಂಡಾದ ನೂರಾರು ರೈತರು ಸಂಚರಿಸುತ್ತಾರೆ. ಅನಾಹುತ ಸಂಭವಿಸುವ ಮುನ್ನ ತುಂಗಭದ್ರಾ ಮಂಡಳಿ ರಸ್ತೆಯನ್ನು ದುರಸ್ತಿ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ. ಕಾಲುವೆಯಲ್ಲಿ 200 ಮೀಟರ್‌ನಷ್ಟು ಮಣ್ಣಿನ ದಂಡೆ ಇದೆ. ಇದು ನೀರಿನ ರಭಸಕ್ಕೆ ಕುಸಿಯುತ್ತಿದೆ. ಹೀಗಾಗಿ ಸಿಮೆಂಟ್ ಗೋಡೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಾಲ್ಕು ವರ್ಷದ ಹಿಂದೆ ಕಾಲುವೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಲಾರಿ ಓಡಾಟಕ್ಕೆ ಅನುಕೂಲವಾಗಲೆಂದು ಸಿಮೆಂಟ್ ಮಾಡದೆ ಹಾಗೆಯೇ ಬಿಡಲಾಗಿತ್ತು. ಬಳಿಕ ಸಿಮೆಂಟ್ ಗೋಡೆ ನಿರ್ಮಿಸಲಿಲ್ಲ. ಇದರಿಂದ ಮಣ್ಣಿನ ಸವಕಳಿಯಾಗುತ್ತಿದೆ. ಕೂಡಲೇ ತುಂಗಭದ್ರಾ ಆಡಳಿತ ಮಂಡಳಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಗೇನಹಳ್ಳಿ ಬಳಿಯ 94 ಎಲ್‌ಎಲ್‌ಸಿ ದುರಸ್ತಿ ಸಂದರ್ಭದಲ್ಲಿ ಲಾರಿಗಳ ಸಂಚಾರಕ್ಕಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಮಳೆ ನೀರು ಹರಿದು ಮಣ್ಣಿನ ಸವಕಳಿಯಾಗಿದೆ. ತುಂಗಭದ್ರಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ. ಈ ಕುರಿತು ಪರಿಶೀಲಿಸಲಾಗುವುದು.| ಶ್ರೀನಿವಾಸ ರೆಡ್ಡಿ, ಇಇ, ತುಂಗಭದ್ರಾ ಆಡಳಿತ ಮಂಡಳಿಮಳೆ ನೀರಿಗೆ, ಕಬ್ಬು ತುಂಬಿದ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳ ಓಡಾಟದಿಂದ ರಸ್ತೆಯ ಮಣ್ಣು ಕುಸಿಯುತ್ತಿದೆ. ಕಾಲುವೆಗೆ ನೀರು ಹರಿಸಿದರೆ ಮಣ್ಣು ಕೊಚ್ಚಿ ಕೊಂಡು ಹೋಗಲಿದೆ. ಇದನ್ನು ತಪ್ಪಿಸಲು ಸಿಮೆಂಟ್ ಗೋಡೆ ನಿರ್ಮಿಸಬೇಕು.| ಶಂಕ್ರಪ್ಪ ಸದಸ್ಯ, ನಾಗೇನಹಳ್ಳಿ, ಗ್ರಾಮ ಪಂಚಾಯಿತಿ