

ಹೊಸಪೇಟೆ: ಹುಡಾ ಅಧ್ಯಕ್ಷ ಹುದ್ದೆ ಸವಾಲಿನದ್ದಾಗಿದ್ದು, ಬುದ್ಧಿವಂತಿಕೆ ಹಾಗೂ ಸರ್ಕಾರದ ನಿಯಮ, ಯೋಜನೆಗಳನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಹುಡಾ ಕಚೇರಿ ಸಭಾಂಗಣದಲ್ಲಿ ಭಾನುವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಶೋಕ್ ಜೀರೆ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತದ ನಿಯಮಾವಳಿಗಳ ನಡುವೆ ಕಾರ್ಯನಿರ್ವಹಿಸಬೇಕು. ನಗರದ ಏಳಿಗೆಗೆ ಶ್ರಮವಹಿಸಬೇಕು. ಕೇವಲ ಬಡಾವಣೆಗಳ ನಿರ್ಮಾಣ ಮಾತ್ರವಲ್ಲದೇ ನಗರದ ನೈರ್ಮಲ್ಯ ಹಾಗೂ ಉದ್ಯಾನದ ಅಭಿವೃದ್ಧಿಗೂ ಗಮನಕೊಡಬೇಕು ಎಂದು ಸಲಹೆ ನೀಡಿದರು.
ಹುಡಾ ಅಧ್ಯಕ್ಷ ಅಶೋಕ್ ಜೀರೆ ಮಾತನಾಡಿ, ತುರ್ತು ಪರಿಸ್ಥಿತಿ ಸಮಯದಲ್ಲಿ ಸಂಪರ್ಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಜತೆಗೆ ಹಲವು ವರ್ಷಗಳಿಂದ ಯಾವುದೇ ಹುದ್ದೆ ಆಕಾಂಕ್ಷಿಯಾಗದೇ ದುಡಿದಿದ್ದೇನೆ. ನನ್ನ ಸೇವೆ ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ್ದು ಪಾರದರ್ಶಕವಾಗಿ ಆಡಳಿತ ನಿರ್ವಹಿಸುತ್ತೇನೆ ಎಂದರು. ನಿಕಟಪೂರ್ವ ಹುಡಾ ಅಧ್ಯಕ್ಷ ಕೊಟ್ರೇಶ್, ಆಯುಕ್ತ ಗುರುಪ್ರಸಾದ್, ತಾಪಂ ಅಧ್ಯಕ್ಷೆ ನಾಗವೇಣಿ, ಹುಡಾ ಕಚೇರಿ ಮೊದಲ ಅಧ್ಯಕ್ಷ ಅಯ್ಯಳಿ ತಿಮ್ಮಪ್ಪ ಹಾಗೂ ಮುಖಂಡರಾದ ಬಾಬುಲಾಲ್ ಜೈನ್, ಕವಿತಾ ಸಿಂಗ್, ಬಸವರಾಜ ನಾಲ್ವತವಾಡ, ಕೃಷ್ಣದೇವರಾಯ ಇತರರಿದ್ದರು.