

ಹೊಸಪೇಟೆ: ಮುಂದೆ ವಿಶ್ವವಿದ್ಯಾಲಯದಲ್ಲಿ ಬಂಜಾರರ ಕರಕುಶಲ ವಸ್ತುಗಳನ್ನು ತಯಾರಿಸುವ ಕುರಿತು ತರಬೇತಿ ನೀಡಲು ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಹೇಳಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ವಿವಿಗೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಅದನ್ನು ಬಳಸಿಕೊಂಡು ಅನೇಕ ತಾಂಡಾಗಳಿಗೆ ಸಂಶೋಧನಾ ವಿದ್ಯಾರ್ಥಿಗಳನ್ನು ಕಳುಹಿಸಿ ಬಂಜಾರ ಸಮುದಾಯದ ಸಂಸ್ಕೃತಿ, ಭಾಷೆಯ ಸಂಪೂರ್ಣ ಮಾಹಿತಿ ಕಲೆಹಾಕಿ ಬಂಜಾರ ಭಾಷೆಯನ್ನು ನಿಘಂಟು ರೂಪದಲ್ಲಿ ಹೊರತರುವ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ ಹಾಗೂ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ಭಾಷಾಶಾಸ್ತ್ರೀಯ ನೆಲೆಯಲ್ಲಿ ದಕ್ಷಿಣ ಭಾರತದ ಲಂಬಾಣಿ ಭಾಷೆ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಎಸ್‌ಕೆ ವಿವಿ ಪ್ರಾಧ್ಯಾಪಕ ಡಾ.ಶಾಂತನಾಯ್ಕ ಮಾತನಾಡಿ, ಭಾರತದ ಉದ್ದಗಲಕ್ಕೂ ಹರಡಿರುವ ಬಂಜಾರ ಸಮುದಾಯ ತಮ್ಮದೇ ಆದ ವಿಶಿಷ್ಟ ಶೈಲಿಯ ಉಡುಗೆ-ತೊಡುಗೆ, ಆಚಾರ-ವಿಚಾರ, ಭಾಷೆ, ಸಂಸ್ಕೃತಿ, ಸಂಪ್ರದಾಯದಿಂದ ದೇಶದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದೆ ಎಂದರು. ದ್ರಾವೀಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಸುಚೇತ ನವರತ್ನ, ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಮಾಧವ ಪೆರಾಜೆ, ಡಾ.ಕೆ.ರಮೇಶ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಇತರರಿದ್ದರು.