ವರ್ಷಾಚರಣೆಗೆ ಸಿಎಂ ಔತಣ ಕೂಟ: ಸುರಪುರ ಶಾಸಕ ರಾಜುಗೌಡ ಹೇಳಿಕೆ; ನಾಯಕತ್ವ ಬದಲಾವಣೆ ಇಲ್ಲ

Surapura MLA Rajugouda MLA Halappa Acharya
ಶಾಸಕರಾದ ರಾಜುಗೌಡ ಮತ್ತು ಹಾಲಪ್ಪ ಆಚಾರ್.
Published on

ಹೊಸಪೇಟೆ: ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೈಕಮಾಂಡ್ ತಿಳಿಸಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.

ಸಚಿವ ಆನಂದ ಸಿಂಗ್ ತಂದೆ ನಿಧನ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ ಬಳಿಕ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜು.26ಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೊಂಡು ಎರಡು ವರ್ಷ ಪೂರ್ಣಗೊಳ್ಳುತ್ತದೆ. ಹೀಗಾಗಿ ಜು.25ರಂದು ಔತಣ ಕೂಟಕ್ಕೆ ಎಲ್ಲ ಶಾಸಕರನ್ನು ಸಿಎಂ ಆಹ್ವಾನಿಸಿದ್ದಾರೆ. ಇದಕ್ಕೆ ಕೆಲವರು ವಿಶೇಷ ಅರ್ಥಕೊಡುತ್ತಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರಳ, ಸಜ್ಜನ. ಸಿಎಂ ಬದಲಾವಣೆ ಬಗ್ಗೆ ಅವರು ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಸ್ವತಃ ಕಟೀಲ್ ಅವರೇ ಅದು ನನ್ನ ಧ್ವನಿಯಲ್ಲ ಎಂದಿದ್ದು, ತನಿಖೆ ನಡೆಸಲು ಸಿಎಂಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆಡಿಯೋ ವೈರಲ್‌ಗೆ ರೆಕ್ಕೆಪುಕ್ಕಗಳು ಬಂದಿವೆ ಎಂದರು.

ಸಿಎಂ ಬದಲಿಸದಂತೆ ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕ್ರಪ್ಪ, ಎಂ.ಬಿ.ಪಾಟೀಲ್ ಸಹ ಬೆಂಬಲ ನೀಡಿದ್ದು, ಖುಷಿ ತಂದಿದೆ. ಶಾಸಕರಾದವರಿಗೆ ಸಚಿವರಾಗಬೇಕು, ಸಚಿವರಾದವರಿಗೆ ಸಿಎಂ ಅಗಬೇಕೆಂಬ ಅಸೆ ಇರುವುದು ಸಹಜ. ಆದರೆ ಎಲ್ಲರ ಅಸೆ ಈಡೇರಲು ಸಾಧ್ಯವಿಲ್ಲ. ದೆಹಲಿಗೆ ಹೋಗಿ ಬಂದರೆ ನಾಯಕತ್ವ ಬದಲಾವಣೆ ಎಂಬುದು ಸರಿಯಲ್ಲ. ಆದರೆ, ದೆಹಲಿಗೆ ಹೋಗುವವರಿಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗುತ್ತಿರುವ ಕಾರಣ ಕೆಲವರು ಸುಮ್ಮನೆ ಹೋಗಿಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಲಸೆ ಬಂದ ಶಾಸಕರು ವೈಯಕ್ತಿಕ ವಿಚಾರಗಳಿಗೆ ಸಭೆ ನಡೆಸಿರಬಹುದು. ಯಡಿಯೂರಪ್ಪ ಅವರನ್ನೇ ನಂಬಿ ಬಂದಿದ್ದೇವೆ. ಯಾಕೆ ಈ ರೀತಿಯಾಗುತ್ತಿದೆ ಎಂಬ ಕುರಿತು ಚರ್ಚೆ ಆಗಿರಬಹುದು ಎಂದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಸಿಎಂ ಬದಲಾವಣೆ ಎಂಬುವುದು ಈ ಹೊತ್ತಿನ ದೊಡ್ಡ ಸುದ್ದಿ ಅಷ್ಟೇ. ಬದಲಾವಣೆ ಪ್ರಶ್ನೆಯೇ ಇಲ್ಲ. ಈಗಾಗಲೇ ಎರಡು ವರ್ಷ ಪೂರೈಸಿದ್ದೇವೆ. ಪೂರ್ಣ ಪ್ರಮಾಣದ ಅವಧಿ ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net