ಹೊಸಪೇಟೆಯ ಅಂಜಿನಮ್ಮನ ಬಗಡಿ ಗುಡ್ಡಕ್ಕೆ ಬೆಂಕಿ: ಗಿಡಮರಗಳು ಆಹುತಿ

Hospete Anjinamma Gudda Fire
ಹೊಸಪೇಟೆ ಹೊರವಲಯದ ಜಂಬುನಾಥಹಳ್ಳಿ ಸಮೀಪದ ಅಂಜಿನಮ್ಮ ಬಗಡಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on

ಹೊಸಪೇಟೆ: ನಗರದ ಸಂಡೂರು ರಸ್ತೆಯಲ್ಲಿ ಬರುವ ಹೊಸಪೇಟೆ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಒಳಪಡುವ ಅಂಜಿನಮ್ಮನ ಬಗಡಿ ಗುಡ್ಡದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಗಿಡಮರಗಳು ಆಹುತಿಯಾದವು.

ಜಂಬುನಾಥಹಳ್ಳಿಯ ಕೂಗಳತೆ ದೂರದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಗುಡ್ಡದ ಅರ್ಧಭಾಗಕ್ಕೆ ಬೆಂಕಿ ಆವರಿಸಿಕೊಂಡಿದ್ದರಿಂದ ನಾನಾ ಸಸ್ಯ, ಗಿಡ, ಮರಗಳು ಸುಟ್ಟುಕರಕಲಾದವು. ಗಾಳಿ ಹೆಚ್ಚಿನ ಮಟ್ಟದಲ್ಲಿ ಬೀಸುತ್ತಿದ್ದರಿಂದ ಬೆಂಕಿ ಗುಡ್ಡದ ತುಂಬೆಲ್ಲಾ ವ್ಯಾಪಿಸಿತ್ತು. ಇದು ಕಿಡಿಗೇಡಿಗಳ ಕೃತ್ಯ ಎಂದು ಸ್ಥಳೀಯರು ದೂರಿದ್ದಾರೆ.

ನಾಯಿ ಮೇಲೆ ಚಿರತೆ ದಾಳಿ: ಜಂಬುನಾಥಹಳ್ಳಿಯ ಜಮೀನಿನಲ್ಲಿ ಕನಕಪ್ಪ ಎಂಬುವರು ಹಾಕಿದ್ದ ಕುರಿಹಟ್ಟಿ ಬಳಿ ನಾಯಿ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿದೆ. ರಾತ್ರಿ ಎರಡು ಗಂಟೆ ವೇಳೆಗೆ ಚಿರತೆ ದಾಳಿ ಮಾಡಿದ್ದು, ನಾಯಿಯನ್ನು ಹೊತ್ತೊಯ್ಯಲು ಎಳೆದಾಡಿದೆ. ಈ ವೇಳೆ ಇತರೆ ನಾಯಿಗಳು ಬೊಗಳಿದ್ದರಿಂದ ಎಚ್ಚರಗೊಂಡ ಕನಕಪ್ಪ ಹಿ ಬ್ಯಾಟರಿ ಆನ್ ಮಾಡಿ ಬೆಳಕು ಬಿಡುತ್ತಿದ್ದಂತೆ ನಾಯಿಯನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ನಾಯಿಯ ಕುತ್ತಿಗೆ, ಕಾಲಿಗೆ ತೀವ್ರ ಗಾಯವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದು, ಬೋನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net