

ಹಿರಿಕರ ರವಿ, ಸೋಮವಾರಪೇಟೆ
ಹದಿನೇಳನೆ ಶತಮಾನದಲ್ಲೇ ಕೊಡಗನ್ನು ಆಳಿದ ಹಾಲೇರಿ ಅರಸರ ನೆಚ್ಚಿನ ಗ್ರಾಮ ಹೊಸಳ್ಳಿ ಎನ್ನಲಾಗಿದೆ. ಈಗ ಕಲ್ಲುಗಣಿ, ಕಾಡಾನೆ ಕಾಟ, ಸಿ ಆ್ಯಂಡ್ ಡಿ ಭೂತ ನೆಮ್ಮದಿಯಾಗಿದ್ದ ಹೊಸಳ್ಳಿ ಗ್ರಾಮದ ರೈತರನ್ನು ಕಂಗೆಡಿಸಿದೆ.
ಹಿಂದೆ ಹೆಬ್ಬಾಲೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಒಂದಷ್ಟು ಜನರು ವಲಸೆ ಬಂದು ಯಲಕನೂರು ಪಕ್ಕದ ಕಾಡುಪ್ರದೇಶದಲ್ಲಿ ನೆಲೆನಿಂತು ಕೃಷಿ ಚಟುವಟಿಕೆಯಲ್ಲಿ ತೊಡಕಿಸಿಕೊಂಡರು. ಹೊಸಬರು ಬಂದು ನೆಲೆ ನಿಂತ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಹೊಸಹಳ್ಳಿ ಗ್ರಾಮ ಎಂದು ಕರೆಯಲು ಪ್ರಾರಂಭಿಸಿದರು.
ಈಗ 57 ಕುಟುಂಬಗಳ ಹೊಸಳ್ಳಿ ಗ್ರಾಮ ಕೃಷಿ ಪ್ರಧಾನವಾಗಿದೆ. 200 ರಷ್ಟು ಜನಸಂಖ್ಯೆಯಿದೆ. ಸಣ್ಣ ಹಿಡುವಳಿದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಫಿ, ಕಾಳುಮೆಣಸು, ಭತ್ತ, ಜೋಳ, ಅಡಕೆ, ಸಿಹಿಗೆಣಸು, ಕೆಸ, ಶುಂಠಿ, ಹಸಿಮೆಣಸು, ಸುವರ್ಣಗೆಡ್ಡೆ ಸೇರಿದಂತೆ ಗ್ರಾಮದ ಮಣ್ಣಿನಲ್ಲಿ ಬೆಳೆಯುವ ಎಲ್ಲ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ.
ಯಡವನಾಡು, ಜೇನುಕಲ್ಲುಬೆಟ್ಟ ಮೀಸಲು ಅರಣ್ಯದ ಮಧ್ಯದಲ್ಲಿ ಹೊಸಳ್ಳಿ ಗ್ರಾಮವಿದ್ದು, ಪ್ರತಿನಿತ್ಯ ಕಾಡಾನೆಗಳ ಸಂಚಾರವಿರುತ್ತದೆ. ಕಾಡುಹಂದಿ, ನವಿಲು, ಕಾಡುಕೋಣಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಬಿತ್ತನೆ, ನಾಟಿ ಮಾಡಿದ ದಿನದಿಂದಲೇ ರೈತರು ಬೆಳೆಯನ್ನು ವನ್ಯಪ್ರಾಣಿಗಳಿಂದ ರಕ್ಷಿಸಿಕೊಳ್ಳಲೇಬೇಕಾಗಿರುವುದರಿಂದ ಕೃಷಿ ಭೂಮಿಯಲ್ಲಿರುವ ಮರಗಳ ಮೇಲೆ ಅಟ್ಟಣಿಕೆ(ತಾತ್ಕಾಲಿಕ ಗುಡಿಸಲು) ನಿರ್ಮಿಸಿಕೊಂಡು ವರ್ಷವಿಡಿ ರಾತ್ರಿ ಕೃಷಿ ಭೂಮಿಯಲ್ಲೇ ಕಳೆಯಬೇಕಾಗುತ್ತದೆ.
ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಕೃಷಿ ಭೂಮಿಗೆ ಬಂದ ತಕ್ಷಣ, ಪಟಾಕಿ ಸಿಡಿಸಿ, ಬೊಬ್ಬೆ ಹಾಕಿ ಓಡಿಸಲಾಗುತ್ತದೆ. ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡರೆ ಕಾಡಾನೆಗಳು ನಾಶಪಡಿಸುತ್ತವೆ ಎಂಬ ಭಯದಿಂದ ಗಟ್ಟಿಮುಟ್ಟಾದ ಮರದ ಮೇಲೆ ಅಟ್ಟಣಿಕೆ ಮಾಡಿಕೊಳ್ಳುತ್ತಾರೆ. ಕೃಷಿ ಮಾಡುವ ಬಹುತೇಕ ಯುವಕರು ಅಟ್ಟಣಿಕೆಯಲ್ಲಿ ರಾತ್ರಿ ಕಳೆಯುತ್ತಾರೆ.
ಕೆಲವೊಮ್ಮೆ ಹಾಡಹಗಲೇ ಕಾಡಾನೆಗಳು ಕೃಷಿ ಫಸಲನ್ನು ಹಾನಿ ಮಾಡುವ ಸಂದರ್ಭವೂ ಇದೆ. ಫಸಲು ಹಾನಿಯಾದಾಗ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ, ಸಣ್ಣ ಪ್ರಮಾಣದ ಫಸಲು ಹಾನಿ ಪರಿಹಾರವನ್ನು ಪಡೆದುಕೊಳ್ಳುತ್ತಾರೆ.
ಕಲ್ಲುಗಣಿಗಳಿಂದ ಸಮಸ್ಯೆ: ಹೊಸಳ್ಳಿ, ಯಲನೂರು ಸುತ್ತಮುತ್ತ ಕಲ್ಲುಗಣಿಕಾರಿಕೆ ಬಹಳ ವರ್ಷಗಳಿಂದ ನಡೆಯುತ್ತಿದೆ. ಕಲ್ಲು ತುಂಬಿದ ಲಾರಿಗಳು ನಿರಂತರವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆ ಗುಂಡಿ ಬಿದ್ದಿದೆ. ಪರಿಸರಕ್ಕೂ ದೊಡ್ಡಮಟ್ಟದ ಹಾನಿಯಾಗಿದೆ. ಗುಣಮಟ್ಟದ ರಸ್ತೆ ಮಾಡಲು ಸರ್ಕಾರ ಅನುದಾನ ಕಲ್ಪಿಸುತ್ತಿಲ್ಲ. ಗಣಿಗಾರಿಕೆ ಸಂಬಂಧ ಒಂದು ಮರ ಕಡಿದರೆ ಹತ್ತು ಗಿಡ ನೆಡಬೇಕೆಂದು ನಿಯಮವಿದ್ದರೂ, ಮರಗಳನ್ನು ಬೆಳೆಸುತ್ತಿಲ್ಲ. ಮರಗಳ ಮಾರಣಹೋಮವಾಗಿದೆ. ಅರಣ್ಯ ಇಲಾಖೆ ಗರಬಡಿದಂತೆ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ಅಸಹಾಯಕತೆ ತೋಡಿಕೊಂಡರು.
ಸಿ ಆ್ಯಂಡ್ ಡಿ ಭೂತ: 1977ರಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಕಂದಾಯ ಇಲಾಖೆ ಸಿ ಆ್ಯಂಡ್ ಡಿ ಭೂಮಿ ಎಂದು ಘೋಷಣೆ ಮಾಡಿತು. ಹೊಸಳ್ಳಿ ಗ್ರಾಮದ ಸರ್ವೆ ನಂ.27/1ರಲ್ಲಿ 31.63 ಹೆಕ್ಟೇರ್ ಭೂಮಿಯನ್ನು ಸಿ ಆ್ಯಂಡ್ ಡಿ ಜಾಗ ಎಂದು ಗುರುತಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಕಂದಾಯ ಇಲಾಖೆ ತೊಂದರೆ ರೈತರಿಗೆ ನೀಡಿಲ್ಲ. ಗ್ರಾಮದ 57 ಕುಟುಂಬಗಳು ಸ.ನಂ.27/1 ರ ಜಾಗದಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರಕ್ಕೆ ಅದೇಶ ನೀಡಿರುವ ಹಿನ್ನೆಲೆ, ರಾಜ್ಯ ಸರ್ಕಾರ ಸೆಕ್ಷನ್-4 ಸರ್ವೆಗೆ ಅನುಮತಿ ನೀಡಿದೆ. ಈಗ ರೈತರು ಕೃಷಿ ಭೂಮಿ ಕಳೆದುಕೊಂಡು ಬೀದಿಪಾಲಾಗುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ದಯಾ ಮರಣಕ್ಕೆ ಅರ್ಜಿ ಸಲ್ಲಿಸುವುದು ಒಂದೇ ಮಾರ್ಗ ಉಳಿದಿರುವುದು ಎಂದು ರೈತಾಪಿ ವರ್ಗ ನೋವು ತೋಡಿಕೊಂಡರು.
ಗ್ರಾಮಕ್ಕೆ ಒಂದೇ ಬಸ್ಸು: ಅಬ್ಬೂರುಕಟ್ಟೆ, ಅರೇಯೂರು, ಹೊಸಳ್ಳಿ, ಯಲಕನೂರು, ಸೀಗೆಹೋಸೂರು, ಕೂಡಿಗೆ, ಕುಶಾಲನಗರ ಮಾರ್ಗದಲ್ಲಿ ಹಿಂದೆ ಖಾಸಗಿ ಬಸ್ ಓಡಾಟವಿತ್ತು. ವಿದ್ಯಾರ್ಥಿಗಳು ನೆಮ್ಮದಿಯಾಗಿ ಶಾಲಾ, ಕಾಲೇಜಿಗೆ ಹೋಗುತ್ತಿದ್ದರು.
ಕಲ್ಲುಗಣಿಗಳಿಂದ ಕಲ್ಲು ತುಂಬಿದ ಲಾರಿಗಳು ಸಂಚಾರಿಸುವ ಹಿನ್ನೆಲೆ ರಸ್ತೆ ಗುಂಡಿಮಯವಾಗಿ ಖಾಸಗಿ ಬಸ್‌ಗಳ ಸಂಚಾರವೂ ನಿಂತು ಹೋಯಿತು. ಆದರೂ ವಿದ್ಯಾರ್ಥಿಗಳು ಕಾಡಾನೆಗಳಿಗೂ ಸೆಡ್ಡು ಹೊಡೆದು 10ರಿಂದ 12 ಕಿ.ಮೀ.ನಡೆದು ಮುಖ್ಯ ರಸ್ತೆಗೆ ತಲುಪಿ ಬಸ್ ಹಿಡಿದು ಕಾಲೇಜಿಗೆ ತೆರಳುತ್ತಿದ್ದಾರೆ. ಈಗ ರಸ್ತೆ ಅಭಿವೃದ್ಧಿಗೆ 15ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕಳೆದ ಮೂರು ತಿಂಗಳ ಹಿಂದೆ ಶಾಸಕ ಡಾ.ಮಂತರ್‌ಗೌಡ ಅವರ, ವಿಶೇಷ ಆಸಕ್ತಿಯಿಂದ ಒಂದು ಕೆಎಸ್‌ಆರ್‌ಟಿ ಬಸ್ ಶಾಲಾ, ಕಾಲೇಜು ಸಮಯದಲ್ಲಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಧಾರ್ಮಿಕ ಆಚರಣೆ: ಕೊಡಗನ್ನು ಆಳಿದ ಲಿಂಗಾಯತ ಹಾಲೇರಿ ಅರಸರ ಕಾಲದಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಾಯ ನೀಡಿದ ಜ್ಞಾಪಕಾರ್ಥ ಬಸವೇಶ್ವರ ಗುಡಿಯನ್ನು ನಿರ್ಮಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರು ಸುಂದರ ದೇವಾಲಯವನ್ನು ಕಟ್ಟಿದ್ದಾರೆ. ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಕಾರ್ತಿಕ ಪೂಜೆ, ಶಿವರಾತ್ರಿ ಹಾಗೂ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯುತ್ತವೆ. ವನದುರ್ಗಿ ಪೂಜೆಯೂ ನಡೆಯುತ್ತದೆ. ಮಠದಮ್ಮ, ಊರಿನ ಚೌಡಿ ಪೂಜೆ ವಿಶೇಷವಾಗಿ ನಡೆಯುತ್ತದೆ.
ಮದ್ಯ ಮಾರಾಟ ನಿಷೇಧ: ಹೊಸಳ್ಳಿ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಗ್ರಾಮದ ಅಭಿವೃದ್ಧಿ ಜವಾಬ್ದಾರಿ ನೋಡಿಕೊಳ್ಳುತ್ತದೆ. ಗ್ರಾಮದಲ್ಲಿ ಮದ್ಯಮಾರಾಟ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಳ್ಳಬಟ್ಟಿಯನ್ನು ಯಾರು ತಯಾರಿಸಿ ಮಾರುವಂತಿಲ್ಲ. ನಿಯಮ ಮೀರಿದರೆ ಸಮಿತಿಯೇ ಅಂತಹವರಿಗೆ ಶಿಕ್ಷೆ ನೀಡಿಲಿದೆ. ಗ್ರಾಮಸ್ಥರ ದೂರು-ದುಮ್ಮಾನಗಳನ್ನು ಸಮಿತಿಯೇ ಆಲಿಸಿ ಪರಿಹಾರ ಕಲ್ಪಿಸುವ ವ್ಯವಸ್ಥೆ ಇದೆ. ಆದಷ್ಟು ಪ್ರಕರಣಗಳನ್ನು ಗ್ರಾಮ ಮಟ್ಟದಲ್ಲೇ ಪರಿಹಾರ ಮಾಡಲಾಗುತ್ತದೆ. ಈ ಮೂಲಕ ಹೊಸಳ್ಳಿ ಒಂದು ಮಾದರಿ ಗ್ರಾಮವಾಗಿದೆ.