ವಿದ್ಯಾರ್ಥಿಗಳ ಬುದ್ಧಿಶಕ್ತಿ ಒರೆಗೆ ಹಚ್ಚಿದ ಪದಬಂಧ

padabanda
Published on

ಹೊಸಕೋಟೆಯ ಮಹದೇವ ಕಾಲೇಜಿನಲ್ಲಿ ಆಯೋಜನೆ

ನಗರಸಭೆ ಆಯುಕ್ತ ಪ್ರಸಾದ್‌ರಿಂದ ಬಹುಮಾನ ವಿತರಣೆ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ/ಬೆಂ.ಗ್ರಾಮಾಂತರ
ಸ್ವಾತಂತ್ರ್ಯ ದಿನದ ಅಂಗವಾಗಿ ಮಹದೇವ ಕಾಲೇಜು ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ‘ವಿಜಯವಾಣಿ’ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕನ್ನಡ ಪದಬಂಧ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೇಶ, ನಾಡು-ನುಡಿ, ಹಿರಿಮೆ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯ ವಿನೂತನ ಪ್ರಯೋಗವಾದ ಪದಬಂಧ ಸ್ಪರ್ಧೆ ವಿದ್ಯಾರ್ಥಿಗಳಲ್ಲಿನ ಬುದ್ಧಿಶಕ್ತಿಯನ್ನು ಒರೆಗೆ ಹಚ್ಚಿತ್ತು. ದೇಶದ ಸ್ವಾತಂತ್ರ್ಯ ಕುರಿತು ರೂಪಿಸಿದ್ದ ಪದಬಂಧ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯದ ಕುರಿತ ಅರಿವನ್ನು ಸಾಣೆ ಹಿಡಿಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಐವರು ವಿಜೇತರನ್ನು ಆಯ್ಕೆ ಮಾಡಿ ನಗದು ಬಹುಮಾನ ವಿತರಿಸಲಾಯಿತು. ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಅಭಿನಂದಿಸಲಾಯಿತು.

300 ಸ್ಪರ್ಧಿಗಳು ಭಾಗಿ: ಹೊಸಕೋಟೆಯ ಮಹದೇವ ಕಾಲೇಜು, ಸರ್ಕಾರಿ ಕಾಲೇಜು ಸೇರಿ ಹತ್ತಕ್ಕೂ ಹೆಚ್ಚು ಕಾಲೇಜಿನಿಂದ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗೆ ಅರ್ಧ ಗಂಟೆ ಕಾಲಮಿತಿ ನೀಡಲಾಗಿತ್ತು.

ರಾಷ್ಟ್ರಧ್ವಜ ವಿತರಣೆ: ನಗರಸಭೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸಲಾಯಿತು. ಗಣ್ಯರೂ ರಾಷ್ಟ್ರಧ್ವಜ ಪ್ರದರ್ಶಿಸಿ ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ‘ಭಾರತಾಂಬೆ ನಿನ್ನ ಜನ್ಮ ದಿನ’ ಎಂಬ ಗಾಯನವು ಕಾರ್ಯಕ್ರಮಕ್ಕೆ ಕಳೆಗಟ್ಟಿತ್ತು. ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನದಂದು ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸುವ ಮೂಲಕ ನಾಡಿಗೆ ನಮನ ಸಲ್ಲಿಸುವಂತೆ ಗಣ್ಯರು ಕರೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸ್ವಾತಂತ್ರ್ಯ ದಿನದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಬಗ್ಗೆ ಗುಣಗಾನ ಮಾಡಿದರು.


ಲಕ್ಷಾಂತರ ಜನರ ತ್ಯಾಗಬಲಿ ಸ್ವಾತಂತ್ರ್ಯ ನಾವಿಂದು ಸ್ವತಂತ್ರ ಭಾರತದ ಭವ್ಯ ಪ್ರಜೆಗಳಾಗಿ ಜೀವನ ಸಾಗಿಸುತ್ತಿರುವುದರ ಹಿಂದೆ ಲಕ್ಷಾಂತರ ಜನರ ತ್ಯಾಗ, ಬಲಿದಾನವಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಲವೇ ಸ್ವಾತಂತ್ರ್ಯ, ಈ ದಿನವನ್ನು ನಾವೆಲ್ಲರೂ ಹೆಮ್ಮೆಯಿಂದ ಆಚರಿಸುವ ಮೂಲಕ ಮಹನೀಯರಿಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಹೊಸಕೋಟೆ ನಗರಸಭೆ ಪೌರಾಯುಕ್ತ ಪ್ರಸಾದ್ ಕರೆ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಜಯವಾಣಿ ಹಮ್ಮಿಕೊಂಡಿದ್ದ ಕನ್ನಡ ಪದಬಂಧ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ದಾಸ್ಯದಲ್ಲಿ ನಲುಗಿದ್ದ ಭಾರತಾಂಭೆಯನ್ನು ಸ್ವತಂತ್ರಗೊಳಿಸಲು ಲೆಕ್ಕವಿಲ್ಲದಷ್ಟು ಮಹನೀಯರು ಜೀವನವನ್ನೇ ಮುಡಿಪಾಗಿಟ್ಟಿದ್ದರು. 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೆಸರಿನಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಕಿಡಿಹೊತ್ತಿಕೊಂಡಿತ್ತು. ಆಂಗ್ಲರ ವಿರುದ್ಧ ಹೋರಾಡಿ ದಾಸ್ಯದಿಂದ ಮುಕ್ತಿಗೊಳಿಸುವ ಪ್ರತಿಜ್ಞೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ನೂರಾರು ವರ್ಷ ಸೆಣೆಸಿ ನಮಗೆಲ್ಲ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಕನ್ನಡ ನಾಡು-ನುಡಿಗೆ ಅದರದೇ ಆದ ಇತಿಹಾಸವಿದೆ. ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ, ಮುತ್ತಿನ ಹಾರವಿದ್ದಂತೆ ಎಂದು ಪೌರಾಯುಕ್ತ ಪ್ರಸಾದ್ ಬಣ್ಣಿಸಿದರು. ಕೇವಲ ಸುದ್ದಿ ಬಿತ್ತರಿಸಲಷ್ಟೇ ಮಾಧ್ಯಮಗಳು ಸೀಮಿತವಲ್ಲ, ಇಂಥ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲೂ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮುಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೆಟ್ಟು ಬೀಳದೆ ಶಿಲೆಯಾಗದು ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳಲ್ಲಿನ ಬುದ್ದಿಶಕ್ತಿಯನ್ನು ಸಾಣೆ ಹಿಡಿಯುವುದೇ ಆಗಿದೆ. ಪೆಟ್ಟು ಬೀಳದೆ ಹೇಗೆ ಕಲ್ಲು ಶಿಲೆಯಾಗುವುದಿಲ್ಲವೋ, ಹಾಗೆ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವಿಲ್ಲದೆ ಜ್ಞಾನಾರ್ಜನೆ ಪಡೆಯುವುದು ಕಷ್ಟಸಾಧ್ಯ ಎಂದು ಪ್ರಸಾದ್ ಅಭಿಪ್ರಾಯಪಟ್ಟರು. ಪದಬಂಧ ಸ್ಪರ್ಧೆಯಿಂದ ನಿಮ್ಮಲ್ಲಿನ ಸಾಮಾನ್ಯ ಜ್ಞಾನವನ್ನು ಪರೀಕ್ಷೆಗೊಡ್ಡಲು ಸಹಕಾರಿಯಾಗಿದೆ. ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂಥ ಕಾರ್ಯಕ್ರಮ ಬುನಾದಿ ಹಾಕಿಕೊಡಲಿದೆ ಎಂದರು.

ಮಾಧ್ಯಮಗಳ ಕಾರ್ಯ ಶ್ಲಾಘನೀಯ ವಿಜಯವಾಣಿ ಪತ್ರಿಕೆ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ನಾಡಿನ ಜನರ ಮನೆಮಾತಾಗಿದೆ ಎಂದು ಮಹದೇವ ಕಾಲೇಜಿನ ಅಧ್ಯಕ್ಷ ರಾಮಾಂಜಿನಿ ಹೇಳಿದರು.

ಸ್ಪರ್ಧಾ ಭಾವನೆ ಬೆಳೆಸಿಕೊಳ್ಳಿ: ವಿದ್ಯಾರ್ಥಿ ದಿಸೆಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಮುನಿನಾರಾಯಣಪ್ಪ ಕಿವಿಮಾತು ಹೇಳಿದರು. ಶಿಕ್ಷಣ ಎನ್ನುವುದು ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗಬಾರದು. ಇದರ ಹೊರತಾಗಿ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಾಮಾನ್ಯ ಜ್ಞಾನವಿಲ್ಲದೆ ಪಠ್ಯಕ್ಕೆ ಸೀಮಿತಗೊಳಿಕೊಳ್ಳುವುದರಿಂದ ಭವಿಷ್ಯದಲ್ಲಿ ಉನ್ನತ ಸ್ಥಾನ ದಕ್ಕಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ ಎಂದರು.

ಇದೊಂದು ಸಣ್ಣ ಪ್ರಯತ್ನ: ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಕನ್ನಡ ಪದಬಂಧ ಸಣ್ಣ ಪ್ರಯತ್ನವಾಗಿದೆ ಎಂದು ಮಹದೇವ ಕಾಲೇಜು ಪ್ರಾಂಶುಪಾಲ ರಾಮ್ನಾಥ್ ಹೇಳಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯದ ಕುರಿತಾದ ಪದಪಂಧ ಜೋಡಣೆ ಮಾಡಿ ಇಂಥ ಕಾರ್ಯಕ್ರಮ ಆಯೋಜಿಸಿರುವ ವಿಜಯವಾಣಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net