ಹೊಸಕೋಟೆ ಸಹಕಾರ ಸಂಘ ಮಾದರಿ, ಸಂಸದ ಬಚ್ಚೇಗೌಡ ಮೆಚ್ಚುಗೆ, ಚನ್ನಬೈರೇಗೌಡ ರೈತ ಸಹಕಾರ ಭವನ ಉದ್ಘಾಟನೆ.

28-Manjunath-HSK-01
Published on

ಹೊಸಕೋಟೆ: ಸಹಕಾರಿ ಕ್ಷೇತ್ರದಲ್ಲಿ ಹೊಸಕೋಟೆಯ ಟಿಎಪಿಸಿಎಂಎಸ್ ಉತ್ತಮ ಸಾಧನೆ ಮಾಡಿ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಶುಕ್ರವಾರ 4 ಕೋಟಿ ರೂ.ವೆಚ್ಚದ ಸಹಕಾರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳು ಬಲಿಷ್ಠಗೊಂಡರೆ ಮಾತ್ರ ರಾಷ್ಟ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ. ರೈತರು ಆರ್ಥಿಕ ಬೆಳವಣಿಗೆ ಸಾಧಿಸಲು ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಹೊಸಕೊಟೆಯಲ್ಲಿ 70 ವರ್ಷದ ಹಿಂದೆ 1 ರೂಪಾಯಿಗೆ ಈ ಜಾಗವನ್ನು ಚನ್ನಬೈರೇಗೌಡರು ಮಾರಾಟ ಮಾಡಿದ್ದರು. ಇಂದು ಲಕ್ಷಾಂತರ ರೈತರಿಗೆ ಸಹಕಾರಿಯಾಗಿದೆ. ಹಾಗೆಯೇ ಟಿ.ಸೊಣ್ಣಪ್ಪ ಅವರು 15 ವರ್ಷದಿಂದ ಅಧ್ಯಕ್ಷರಾಗಿ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಶ್ಲಾಸಿದರು.

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬೆರೆಯಲು ಅವಕಾಶ ನೀಡಬಾರದು, ಆದ್ದರಿಂದಲೇ ತಾಲೂಕಿನಲ್ಲಿರುವ 9 ಸಹಕಾರ ಸಂಘಗಳು ಒಗ್ಗಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಭಾಯಿಸಿದಲ್ಲಿ ಉತ್ತಮ ಲಿತಾಂಶ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ರವಿ ಮಾತನಾಡಿ, ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತಿದ್ದು, 2011ರಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಹೊಂದಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪರವಾನಗಿ ಪಡೆದಿದೆ ಎಂದರು.

ರಚಿಸಿರುವ 9,204 ಸ್ವಸಹಾಯ ಸಂಘಗಳಲ್ಲಿ 1,260ಕ್ಕೆ 28.88 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯ 6,2981 ರೈತ ಸದಸ್ಯರು ಸಾಲಮನ್ನಾ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ನಿರ್ದೇಶಕರಾದ ಸಿ.ಮುನಿಯಪ್ಪ, ಎಂ.ಬಾಬುರೆಡ್ಡಿ, ಎನ್.ಡಿ.ರಮೇಶ್, ಎ.ಮಂಜುನಾಥ, ಪಿ.ನಾರಾಯಣಪ್ಪ, ಎಂ.ನಟೇಶ್, ವಿ. ಲಕ್ಷ್ಮೀನಾರಾಯಣ, ಉಷಾರಾಣಿ, ಕೆ. ಪುಷ್ಪಲತಾಗಣೇಶ್, ಕೆ. ಕೃಷ್ಣಮೂರ್ತಿ, ಜಗದೀಶ್, ವಸಂತಕುಮಾರ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ವೆಂಕಟರಾಜು, ತಾಲೂಕು ನಿರ್ದೇಶಕ ಕೆ.ಎಸ್.ಸುರೇಶ್, ವ್ಯವಸ್ಥಾಪಕ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net