

ವಿಜಯವಾಣಿ ಸುದ್ದಿಜಾಲ ಹೊಸಕೋಟೆ/ನಂದಗುಡಿ
ಮಳೆ ಕೊರತೆ ಹಿನ್ನೆಲೆಯಲ್ಲಿ ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಮಾಡಿದ ತೊಗರಿ, ಅಲಸಂದೆ ಹಾಗೂ ರಾಗಿ ಬೆಳೆ ಒಣಗುತ್ತಿದ್ದು, ರೈತರು ಕಂಗಾಲಾಗುವಂತಾಗಿದೆ.
ಪ್ರತಿ ವರ್ಷ ಮುಂಗಾರಿನಲ್ಲಿ ತಾಲೂಕಿನಲ್ಲಿ 11,920 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿತ್ತು. ರೈತರು ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ತೊಗರಿಯೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬಿತ್ತನೆ ಮಾಡುತ್ತಿದ್ದರು. ಅದರಂತೆ ಮಳೆಯನ್ನು ನಂಬಿ ಕೃಷಿ ಚಟುವಟಿಕೆಗಳಿಗೆ ಜಮೀನನ್ನು ರೈತರು ಸಜ್ಜುಗೊಳಿಸಿದ್ದರು. ಆದರೆ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿದ ಬೆಳೆ ಕೈಸೇರುವುದಿಲ್ಲ ಎಂಬ ಆತಂಕ ಮನೆಮಾಡಿದೆ.
ನಂದಗುಡಿ ಹೋಬಳಿಯಲ್ಲಿ 2,867 ಹೆಕ್ಟೇರ್, ಜಡಿಗೇನಹಳ್ಳಿ 2,825 ಹೆಕ್ಟೇರ್, ಸೂಲಿಬೆಲೆ 2,968 ಹೆಕ್ಟೇರ್ ಕಸಬಾ 2,162, ಅನುಗೊಂಡಹಳ್ಳಿ 904 ಹೆಕ್ಟೇರ್‌ನಷ್ಟು ಬಿತ್ತನೆ ಕಾರ್ಯ ನಡೆದಿತ್ತು. ಆದರೆ ಮಳೆ ಕೊರತೆಯಿಂದ ನಷ್ಟ ಎದುರಿಸುವಂತಾಗಿದೆ.
ಕೃಷಿ ಇಲಾಖೆ ನಿರೀಕ್ಷೆಯಂತೆ ಈಗಾಗಲೇ ನೆಲಗಡಲೆ, ತೊಗರಿ ಹಾಗೂ ದ್ವಿದಳ ಧಾನ್ಯಗಳ ಬಿತ್ತನೆ ಕೆಲಸ ಮುಗಿದು, ರಾಗಿ ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ತಾಲೂಕಿನಾದ್ಯಂತ ಮಳೆ, ಬರದ ಛಾಯೆ ಆವರಿಸಿದೆ.
ಮೇವಿಗೂ ತತ್ವಾರ: ಜಾನುವಾರು ಮೇವಿಗೂ ತೊಂದರೆ ಎದುರಾಗಿದೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಕುಡಿವ ನೀರಿಗೂ ತತ್ವಾರ ಎದುರಾಗಿದೆ. ಪ್ರತಿವರ್ಷ ಜೂನ್, ಜುಲೈನಲ್ಲಿ ಮೊದಲ ಹಂತದ ಬಿತ್ತನೆ ಕಾರ್ಯ ನಡೆಯುತ್ತದೆ. ಭೂಮಿ ಹದ ಇಲ್ಲದ ರೈತರು ಹಿಂಗಾರು ಮಳೆಗೆ ಅನುಗುಣವಾಗಿ ಕೆಲವೊಂದು ರಾಗಿ ತಳಿಗಳನ್ನು ಬಿತ್ತನೆ ಮಾಡುತ್ತಾರೆ. ಸಾಧಾರಣವಾಗಿ ಮುಂಗಾರು ಆರಂಭದಲ್ಲಿ ಎಂಆರ್1, ಎಂಆರ್ 6 ರಾಗಿ ತಳಿಗಳನ್ನು ಬಿತ್ತನೆ ಮಾಡಿದರೆ, ಆಗಸ್ಟ್ ಮೊದಲ ವಾರದಲ್ಲಿ ಮಳೆ ಆಧಾರಿಸಿ ಎಂಎಲ್ 365, ಎಸ್‌ಪಿಯು 28 ತಳಿಗಳನ್ನು ಬಿತ್ತುವುದು ಸಾಮಾನ್ಯ. ಆದರೆ, ಈ ಬಾರಿ ಮಳೆಯ ತೀವ್ರ ಕೊರತೆಯಿಂದ ರೈತರು ಕಂಗೆಟ್ಟಿದ್ದಾರೆ.
ಹೊಸಕೋಟೆಯಲ್ಲಿ ಹೆಚ್ಚು ರಾಗಿ: ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ಸಾಮಾನ್ಯವಾಗಿ ಹೆಚ್ಚು ರಾಗಿ ಬೆಳೆಯುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಜತೆಗೆ ಹತ್ತಾರು ಎಕರೆಯಲ್ಲಿ ರಾಗಿ ಬಿತ್ತನೆ ಮಾಡುವ ವಾಡಿಕೆ ಇದೆ. ನಂತರದಲ್ಲಿ ತೊಗರಿ, ಕಡಲೆ, ಅಲಸಂದೆ, ಮೇವಿನ ಜೋಳ, ಸ್ವೀಟ್ ಕಾರ್ನ್ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಇವೆಲ್ಲ ಬೆಳೆಗಳಿಗೂ ಮಳೆಯೇ ಆಧಾರವಾಗಿದೆ. ತಾಲೂಕಿನಲ್ಲಿ ಶಾಶ್ವತ ನೀರಿನ ಮೂಲಗಳಿಲ್ಲದಿರುವುದರಿಂದ ಮಳೆಯನ್ನು ನಂಬಿದ ರೈತರು ಆಕಾಶ ದಿಟ್ಟಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ 11 ಎಕರೆಗೆ ರಾಗಿ, ಜೋಳ ಬಿತ್ತನೆ ಮಾಡಿದ್ದೇನೆ. ಬಿತ್ತನೆ ಮಾಡಿದ ರಾಗಿ ಮೊಳಕೆ ಬಂದು ತೇವಾಂಶವಿಲ್ಲದೆ ಒಣಗುತ್ತಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದೇವೆ. ತಾಲೂಕಿನ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸಕೋಟೆಯನ್ನು ಬರತಾಲೂಕು ಎಂದು ೋಷಿಸಬೇಕು.
ಮುನೇಗೌಡ, ಮುದ್ದನಹಳ್ಳಿ