

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆಯ ಕೊಳತೂರಿನಲ್ಲಿ ಮಂಗಳವಾರ ಬಾಣಂತಿ ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ. ಪೊಲೀಸ್ ಪೇದೆ ಕಿಶೋರ್ ತಲೆಯಲ್ಲಿ ಹೊಕ್ಕಿದ್ದ ಅನುಮಾನದ ಭೂತವೇ ಪತ್ನಿ ಕೊಲೆಗೆ ಪ್ರಮುಖ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಕೊಳತೂರು ಗ್ರಾಮದ ಪ್ರತಿಭಾ (28) ಮೃತ ದುರ್ದೈವಿ, ಚಾಮರಾಜನಗರ ಜಿಲ್ಲೆ ರಾಮಸಮುದ್ರ ಠಾಣೆ ಪೇದೆ ಕಿಶೋರ್(31) ಕೊಲೆ ಆರೋಪಿ.
150 ಬಾರಿ ಕರೆ ಮಾಡಿದ್ದ: ವರ್ಷದ ಹಿಂದಷ್ಟೆ ಹಸೆಮಣೆ ಹತ್ತಿದ್ದ ಕಿಶೋರ್ ಹಾಗೂ ಪ್ರತಿಭಾ ದಂಪತಿಗೆ 11 ದಿನ ಮಗುವಿದೆ. ಮದುವೆಯಾದ ಹೊಸದರಿಂದಲೂ ಕಿಶೋರ್, ಪತ್ನಿ ಮೇಲೆ ಅನುಮಾನ ಕಣ್ಣು ನೆಟ್ಟಿದ್ದ, ಪ್ರತಿಭಾ ತನ್ನ ಕಾಲೇಜು ಗೆಳೆಯರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಇದೇ ವಿಷಯವಾಗಿ ಇಬ್ಬರ ನಡುವೆ ಮನಸ್ಥಾಪವಿತ್ತು ಎನ್ನಲಾಗಿದೆ. ಇದೇ ವಿಷಯವಾಗಿ ಕಳೆದೆರಡು ದಿನದ ಹಿಂದೆ ಪತ್ನಿಗೆ ಕರೆ ಮಾಡಿ ನಿಂದಿಸಿದ್ದ. ಇದನ್ನು ಗಮನಿಸಿದ್ದ ಪ್ರತಿಭಾ ಪಾಲಕರು ಕರೆ ಸ್ವೀಕರಿಸದಂತೆ ಮಗಳಿಗೆ ತಾಕೀತು ಮಾಡಿದ್ದರು. ಇದಾದ ಬಳಿಕ ಕಿಶೋರ್ 150 ಬಾರಿ ಕರೆ ಮಾಡಿದ್ದ ಎನ್ನಲಾಗಿದ್ದು, ಯಾವ ಕರೆಯನ್ನು ಪ್ರತಿಭಾ ಸ್ವೀಕರಿಸಿರಲಿಲ್ಲ. ಇದರಿಂದ ಕುಪಿತಗೊಂಡು ರಾಮಸಮುದ್ರದಿಂದ ಹೊರಟ ಕಿಶೋರ್ ನೇರವಾಗಿ ಅತ್ತೆ ಮನೆಗೆ ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಅವಳನ್ನು ಕೊಂದು ಬಿಟ್ಟೆ: ಕೊಠಡಿಯೊಂದರಲ್ಲಿ ಪತ್ನಿ ದುಪ್ಪಟ್ಟದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ, ಬಳಿಕ ಅವಳನ್ನು ಕೊಂದು ಬಿಟ್ಟೆ ಎಂದು ಚೀರುತ್ತಾ ಹೊರಬಂದ ಎಂದು ಪ್ರತಿಭಾ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿದ್ದ: ದುರಂತದ ಸಂದರ್ಭದಲ್ಲಿ ಕಿಶೋರ್ ಕ್ರಿಮಿನಾಶಕ ಸೇವಿಸಿದ್ದ ಎನ್ನಲಾಗಿದ್ದು, ಕೃತ್ಯದ ಬಳಿಕ ಅಸ್ವಸ್ಥನಾಗಿದ್ದ, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚೇತರಿಸಿಕೊಂಡ ಬಳಿಕ ಹೊಸಕೋಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಮರ್ಯಾದೆ ಕೊಡಲಿಲ್ಲ ಎಂಬ ಆರೋಪ: 11 ದಿನದ ನೀರು ಹಾಕುವ ಶಾಸದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಶೋರ್ ಕುಟುಂಬದವರಿಗೆ ಪ್ರತಿಭಾ ಕಡೆಯವರು ಮರ್ಯಾದೆ ಕೊಟ್ಟಿರಲಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬದ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದೇ ವಿಷಯಕ್ಕೆ ಆಕ್ರೋಶಗೊಂಡು ಕಿಶೋರ್ ಕೃತ್ಯ ಎಸಗಿದ್ದಾನೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ತನಿಖೆ ವೇಳೆ ಕಿಶೋರ್ ತಲೆಯಲ್ಲಿ ಹೊಕ್ಕಿದ್ದ ಅನುಮಾನದ ಭೂತವೇ ಇಂಥ ದುಷ್ಕೃತ್ಯಕ್ಕೆ ನೇರ ಕಾರಣ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.