ಒಗ್ಗಟ್ಟಿನಿಂದ ಸ್ವಾತಂತ್ರ್ಯೋತ್ಸವ ಆಚರಿಸೋಣ

hosakote mla meeting
Published on

ಶಾಸಕ ಶರತಬಚ್ಚೇಗೌಡ ಇಂಗಿತ

ಎಲ್ಲರೂ ಭಾಗವಹಿಸುವಂತೆ ಮನವಿ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಒಗ್ಗಟ್ಟಿನಿಂದ ಎಲ್ಲ ಅಧಿಕಾರಿಗಳ ಸಹಕಾರದೊಂದಿಗೆ ಸಾರ್ವಜನಿಕರು ಹಾಗೂ ಮಕ್ಕಳೊಟ್ಟಿಗೆ ಆಚರಣೆ ಮಾಡೋಣ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಸ್ವಾತಂತ್ರ್ಯ ದಿನದ ಸಂಬಂಧ ಅಧಿಕಾರಿಗಳು ಹಾಗೂ ವಿವಿಧ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಆ.15ರಂದು ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಮುಗಿಸಬೇಕಿದ್ದು, ಮಕ್ಕಳನ್ನು ಹೆಚ್ಚಿನ ಸಮಯ ಬಿಸಿಲಿನಲ್ಲಿ ಕಾಯಿಸುವುದು ಬೇಡ. ಸಂಭ್ರಮಾಚರಣೆಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಅವರಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ, ಮೈದಾನದಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನದ ವ್ಯವಸ್ಥೆಯನ್ನು ಆಯಾ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಪಥ ಸಂಚಲನಕ್ಕೆ ಜನಸಂದಣಿ ನಿಯಂತ್ರಣದ ಜತೆಗೆ ಭದ್ರತೆಗೆ ಪೊಲೀಸ್ ಇಲಾಖೆಗೆ ಮುಂದಾಗಬೇಕು. ಮೈದಾನದ ಸ್ವಚ್ಛತೆ ಹಾಗೂ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸುವ ಜವಾಬ್ದಾರಿಯನ್ನು ನಗರಸಭೆ ವಹಿಸಬೇಕು. ಮಕ್ಕಳ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ತಗೆದುಕೊಳ್ಳಬೇಕು ಎಂದರು.
ತಹಸೀಲ್ದಾರ್ ವಿಜಯ್‌ಕುಮಾರ್ ಮಾತನಾಡಿ, ಆ.15 ರಂದು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿರಬೇಕು. ಈ ಸಂಬಂಧ ಇಲಾಖೆಯ ಪ್ರಮುಖರು ಸಿಬ್ಬಂದಿಗೆ ಶೀಘ್ರ ಮನವರಿಕೆ ಪತ್ರ ನೀಡಬೇಕು ಎಂದರು.
ನಗರಸಭೆ ಸದಸ್ಯರಾದ ಕೇಶವ್‌ಮೂರ್ತಿ, ಗೌತಮ್, ಮುಖಂಡರಾದ ಬಿ.ವಿ.ಬೈರೇಗೌಡ, ನವಾಜ್, ಎನ್ ನಾಗರಾಜ್, ಗೋಪಿನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net